ಕಲಬುರಗಿ: ಜನಸಂಖ್ಯಾ ಸ್ಫೋಟ, ಮಾನವನ ದುರಾಸೆ, ಮೋಸ ಸೇರಿದಂತೆ ಮುಂತಾದ ಕಾರಣಗಳಿಂದ ಸರಕುಗಳಲ್ಲಿ ಕಲಬೆರಕೆ ವ್ಯಾಪಕವಾಗಿದೆ, ಗುಣಮಟ್ಟದ ಪ್ರಮಾಣ ಕಡಿಮೆಯಾಗಿರುವುದು ಗೋಚರಿಸುತ್ತಿದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಗುಣಮಟ್ಟದ ಸರಕುಗಳ ಉತ್ಪಾದನೆಯ ಪ್ರಮಾಣ ಹೆಚ್ಚಳವಾಗಬೇಕಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ ಪಾಟೀಲ ಆಶಯ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿನ ಸನಲೈಟ್ ಟ್ಯುಟೋರಿಯಲ್ಸ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ‘ವಿಶ್ವ ಮಾಪಕ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಸರಕು ಮತ್ತು ಸೇವೆಯ ಗುಣಮಟ್ಟದ ಬಗ್ಗೆ ವ್ಯಾಪಕವಾದ ಪ್ರಚಾರವಾಗಿ ಗ್ರಾಹಕರು ಜಾಗೃತರಾಗಬೇಕೆಂಬ ಉದ್ದೇಶದಿಂದ ವಿಶ್ವಸಂಸ್ಥೆಯು 1990ರಿಂದ ಈ ದಿನವನ್ನು ಆಚರಸುವಂತೆ ಕರೆ ನೀಡಿದೆ. ನಾವು ಯಾವುದೆ ಸರಕು- ಸೇವೆಗಳನ್ನು ಬಳಸಿದರೂ ಅದರಲ್ಲಿನ ಗುಣಮಟ್ಟವನ್ನು ಪ್ರಶ್ನಿಸುವಂತಾಗಿದೆ. ಬಹುಬೇಗನೆ ಶ್ರೀಮಂತನಾಗಬೇಕೆಂಬ ಮಾನವನ ದುರಾಸೆಯೇ ಕಲಬೆರಕೆಗೆ ಪ್ರಮುಖ ಕಾರಣವಾಗಿದೆ. ಸರಕು- ಸೇವೆಗಳ ಗುಣಮಟ್ಟ ವ್ಯಕ್ತಿಯ ಜೀವನದ ವಯಸ್ಸಿನ ಮೇಲೆ ಪರಿಣಾಮ ಉಂಟುಮಾಡುತ್ತದೆ. ಕಲಬೆರಕೆ, ವಿಷಯುಕ್ತ ಆಹಾರ ಸೇವನೆಯು, ಮಾನವನ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತಗೊಳಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ಸೈಯದ್ ಹಮೀದ್, ಪೂಜಾ ಹೂಗಾರ, ಪ್ರತ್ವಿ ಕೋರವಾರ, ಮುಸ್ಕಾನ್ ಶೇಖ್, ಕಾವೇರಿ ಹೌದೆ, ಪ್ರಮುಖರಾದ ಪ್ರವೀಣ, ಹರೀಶ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.