ಕಲಬುರಗಿ: ನಮ್ಮ ದೇಶ ಸೇರಿದಂತೆ ವಿಶ್ವದಲ್ಲಿ ದಿನನಿತ್ಯ ನೂರಾರು ಅಮಾಯಕರ ಸಾವಿಗೆ ಕಾರಣವಾಗಿ, ಜಗತ್ತನ್ನು ತಲ್ಲಣಗೊಳಿಸಿ, ಅಶಾಂತಿಯುತ ವಾತಾವರಣದ ಸೃಷ್ಟಿಗೆ ಕಾರಣಿಕೃತವಾದ ಭಯೋತ್ಪಾದನೆ ಎಂಬುದು ದೊಡ್ಡ ಸಾಮಾಜಿಕ ಪಿಡುಗಾಗಿದೆ. ರಾಷ್ಟ್ರದ ಶಾಂತಿ, ಅಭಿವೃದ್ಧಿಗೆ ಇದು ತೊಡಕಾಗಿದೆ, ಅದರ ನಿರ್ಮೂಲನೆಗೆ ಎಲ್ಲರೂ ಜೊತೆಗೂಡಿ ಬೇರು ಸಹಿತ ಸರ್ವನಾಶ ಮಾಡುವ ದೃಢ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಗಂಗಾ ನಗರದ ವಿವೇಕಾನಂದ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ‘ರಾಷ್ಟ್ರಿಯ ಭಯೋತ್ಪಾದನಾ ವಿರೋಧಿ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಅವರು, ಭಯೋತ್ಪಾದನೆಗೆ ಎಂದಿಗೂ ಕೂಡಾ ಪ್ರತ್ಯಕ್ಷವಾಗಲಿ ಅಥವಾ ಪರೋಕ್ಷವಾಗಲಿ ಬೆಂಬಲಿಸುವುದು ದೇಶದ್ರೋಹದ ಕೆಲಸವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ ಮಳ್ಳಿ ಮಾತನಾಡಿ, ಶಾಂತಿ, ಸಹನೆ, ಅಹಿಂಸೆಗೆ ಹೆಸರಾದ ನಮ್ಮ ದೇಶದಲ್ಲಿ ಕೆಲವು ದುಷ್ಟ ಶಕ್ತಿ ಸಮಾಜದಲ್ಲಿ ಅರಾಜಕತೆಯ ವಾತವರಣ ಸೃಷ್ಟಿಸುವ ಕಾರ್ಯ ಮಾಡುತ್ತಿವೆ. ಅಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಭಾರತೀಯ ಒಕ್ಕೂರಲಿಂದ ಖಂಡಿಸುವ ಮೂಲಕ ಅದರ ನಾಶಕ್ಕೆ ಶ್ರಮಿಸಬೇಕು ಎಂದು ಮಾರ್ಮಿಕವಾಗು ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರೌಢಶಾಲಾ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಗುಡಬಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕಾವೇರಿ ಹೂನಳ್ಳಿ, ಶಿಕ್ಷಕಿ ಶೃತಿ ಕುಲಕರ್ಣಿ, ಸೇವಕಿ ಪೂಜಾ ನಾಟಿಕಾರ ಸೇರಿದಂತೆ ಅನೇಕರು ಇದ್ದರು.