ಅಹ್ಮದಾಬಾದ್: ಕಳೆದ ವರ್ಷ ಮಹಾರಾಷ್ಟ್ರದ ಮುಂಬೈನಲ್ಲಿ ವ್ಯಕ್ತಿಯೊಬ್ಬರಿಗೆ ಐಸ್‌ಕ್ರೀಂನಲ್ಲಿ ಮನುಷ್ಯನ ಬೆರಳೊಂದು ಸಿಕ್ಕಿ ಬೆಚ್ಚಿ ಬೀಳುವಂತೆ ಮಾಡಿತ್ತು. ತನಿಖೆಯ ಬಳಿಕ ಇದು ಐಸ್‌ಕ್ರೀಂ ಕಾರ್ಖಾನೆಯ ಕಾರ್ಮಿಕನ ಬೆರಳು ಎಂಬುದು ತಿಳಿದು ಬಂದಿತ್ತು. ಈ ಘಟನೆ ಜನಮಾನಸದಿಂದ ಮಾಸುವ ಮೊದಲೆ ಈಗ ಗುಜರಾತ್‌ನ ಅಹ್ಮದಾಬಾದ್‌ನ ಮಹಿಳೆಯೊಬ್ಬರು ಐಸ್‌ಕ್ರೀಂನಲ್ಲಿ ಸಿಕ್ಕ ವಸ್ತುವನ್ನು ನೋಡಿ ಅಸ್ವಸ್ಥಗೊಂಡಿದ್ದಾರೆ. ನಿರಂತರವಾಗಿ ವಾಂತಿ ಮಾಡಲು ಶುರು ಮಾಡಿದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಮಾನ್ಯವಾಗಿ ಖುಷಿ ಕ್ಷಣಗಳನ್ನು ಹಂಚಿಕೊಳ್ಳಲು ಅನೇಕರು ಐಸ್‌ಕ್ರೀಂ ಸೇವಿಸುತ್ತಾರೆ. ಆದರೆ ಗುಜರಾತ್‌ನ ಮಹಿಳೆಯೊಬ್ಬರಿಗೆ ಐಸ್‌ಕ್ರೀಂ ಸೇವನೆ ಭಯಾನಕ ಘಟನೆಯಾಗಿ ಬದಲಾಗಿದೆ. ಇದಕ್ಕೆ ಕಾರಣವಾಗಿದ್ದು, ಐಸ್‌ಕ್ರೀಂನಲ್ಲಿ ಸಿಕ್ಕಿದ ವಸ್ತು. ಐಸ್‌ಕ್ರೀಂ ಸೇವಿಸುತ್ತಿದ್ದ ಮಹಿಳೆಗೆ ಅರ್ಧ ಐಸ್‌ಕ್ರೀಂ ಸೇವಿಸಿದ ನಂತರ ಅದರಲ್ಲಿ ಹಲ್ಲಿಯ ಬಾಲ ಸಿಕ್ಕಿದೆ.
ಆ ಮಹಿಳೆ ಅಹಮದಾಬಾದ್‌ನ ಮಣಿನಗರ ಪ್ರದೇಶದ ಮಹಾಲಕ್ಷ್ಮಿ ಕಾರ್ನರ್ ಅಂಗಡಿಯಿಂದ ತನಗಾಗಿ ಮತ್ತು ತನ್ನ ಮಕ್ಕಳಿಗಾಗಿ ‘ಹ್ಯಾವ್ಮೋರ್’ ಬ್ರಾಂಡ್‌ನ ನಾಲ್ಕು ಐಸ್ ಕ್ರೀಮ್ ಕೋನ್‌ಗಳನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾಳೆ. ಅವರು ಅರ್ಧದಷ್ಟು ಐಸ್’ಕ್ರೀಂ ಸೇವಿಸಿದ ನಂತರ ಅವರಿಗೆ, ಹಲ್ಲಿಯ ಒಂದು ಭಾಗ ಆ ಐಸ್‌ಕ್ರೀಂನಲ್ಲಿ ಕಾಣಿಸಿದೆ. ಅದು ಬಾಲದಂತೆ ಕಾಣಿಸುತ್ತಿತ್ತು.
ಇದಾಗಿ ಸ್ವಲ್ಪ ಸಮಯದ ನಂತರ, ಮಹಿಳೆಗೆ ತೀವ್ರ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದೆ. ಕೂಡಲೆ ಮನೆಯವರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾವು ನಾಲ್ಕು ಐಸ್‌ಕ್ರೀಂ ಕೋನ್‌ಗಳು ಖರೀದಿಸಿದ್ದೆವೆ. ಅದರಲ್ಲಿ ಒಂದು ಕೋನ್‌ನಲ್ಲಿ ಹಲ್ಲಿಯ ಬಾಲ ಸಿಕ್ಕಿದೆ. ಇದಾದ ನಂತರ ನನಗೆ ನಿರಂತರವಾಗಿ ವಾಂತಿಯಾಗಿದೆ. ಅದೃಷ್ಟವಶಾತ್ ನನ್ನ ಮಕ್ಕಳು ಇದನ್ನು ತಿನ್ನಲಿಲ್ಲ. ಇದಕ್ಕಿಂತ ಹೆಚ್ಚೆನಾದರು ಸಂಭವಿಸಿದಲ್ಲಿ, ನಾವು ಕಂಪನಿಯ ವಿರುದ್ಧ ಪ್ರಕರಣ ದಾಖಲಿಸುತ್ತೆವೆ, ಏನನ್ನಾದರೂ ಸೇವಿಸುವ ಮೊದಲು ದಯವಿಟ್ಟು ಉತ್ಪನ್ನಗಳನ್ನು ಪರಿಶೀಲಿಸಿ ಎಂದು ಸಂತ್ರಸ್ತ ಮಹಿಳೆ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್‌ಗೆ ದೂರು ನೀಡಿದ್ದಾರೆ. ಮಹಿಳೆಯ ದೂರಿನ ನಂತರ ಅವರು ಐಸ್’ಕ್ರೀಂ ಖರೀದಿಸಿದ ಮಹಾಲಕ್ಷ್ಮಿ ಕಾರ್ನರ್ ಆಹಾರ ಸುರಕ್ಷತಾ ಕಾಯ್ದೆಯಡಿ ಪರವಾನಗಿ ಹೊಂದಿಲ್ಲದ ಕಾರಣ ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಜೊತೆಗೆ ಐಸ್’ಕ್ರೀಂ ಬ್ರ್ಯಾಂಡ್ ಹ್ಯಾವ್ಮೋರ್ ಮೇಲೆ 50,000 ರೂ.ಗಳ ದಂಡ ಕೂಡ ವಿಧಿಸಲಾಗಿದೆ.
ಅಹ್ದಾಬಾದನ್‌ನ ಮಣಿನಗರ ಪ್ರದೇಶದಲ್ಲಿ ಐಸ್’ಕ್ರೀಂ ಕೋನ್’ನಲ್ಲಿ ಹಲ್ಲಿ ಪತ್ತೆಯಾಗಿರುವ ಬಗ್ಗೆ ಮಾಧ್ಯಮಗಳ ಮೂಲಕ ನಮಗೆ ದೂರು ಬಂದಿತು. ನಾವು ತಕ್ಷಣ ಮಹಿಳೆಯನ್ನು ಸಂಪರ್ಕಿಸಿದಾಗ ಅವರು ಮಹಾಲಕ್ಷ್ಮಿ ಕಾರ್ನರ್ ಎಂಬ ಅಂಗಡಿಯಿಂದ ಹಾವ್ಮೋರ್ ಐಸ್ ಕ್ರೀಮ್ ಕೋನ್’ಗಳನ್ನು ಖರೀದಿಸಿದ್ದಾಗಿ ತಿಳಿದುಬಂದಿದೆ. ನಮ್ಮ ತಂಡ ಅಂಗಡಿಯನ್ನು ಪರಿಶೀಲಿಸಿದಾಗ ಅದು ಆಹಾರ ಸುರಕ್ಷತಾ ಕಾಯ್ದೆಯಡಿ ಪರವಾನಗಿ ಹೊಂದಿಲ್ಲ ಎಂದು ತಿಳಿದು ಬಂದಿದೆ. ನಾವು ತಕ್ಷಣ ಕ್ರಮ ಕೈಗೊಂಡು ಅಂಗಡಿಗೆ ಬೀಗ ಹಾಕಿದ್ದೆವೆ ಎಂದು ಆಹಾರ ಇಲಾಖೆಯ ಅಧಿಕಾರಿ ಡಾ. ಭವಿನ್ ಜೋಶಿ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಸೀಜ್ ಆದ ಮಹಾಲಕ್ಷ್ಮಿ ಕಾರ್ನರ್ ಶಾಪ್‌ಗೆ ನರೋಡಾ ಜಿಐಡಿಸಿ ಹಂತ 1 ರಲ್ಲಿರುವ ಹಾವ್ಮೋರ್ ಐಸ್ ಕ್ರೀಮ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಿಂದ ಐಸ್ ಕ್ರೀಮ್ ಕೋನ್ ಸರಬರಾಜು ಆಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಐಸ್ ಕ್ರೀಮ್ ಕೋನ್’ಗಳ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ ಮತ್ತು ಮಾರುಕಟ್ಟೆಯಿಂದ ಸಂಪೂರ್ಣ ಐಸ್‌ಕ್ರೀಂ ಬ್ಯಾಚ್ ಹಿಂಪಡೆಯಲು ಕಂಪನಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.