ನವದೆಹಲಿ: ಬಜೆಟ್ 2025ರಲ್ಲಿ ಮಧ್ಯಮ ವರ್ಗಕ್ಕೆ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ಕೊಟ್ಟಿದೆ. ವಾರ್ಷಿಕ 12 ಲಕ್ಷದವರೆಗೆ ಆದಾಯ ಹೊಂದಿರುವವರು ತೆರಿಗೆ ಕಟ್ಟುವಂತಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಪ್ರತಿ ಬಾರಿ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿತ್ತು. ಹೀಗಾಗಿ ಈ ಬಾರಿ ಗರಿಷ್ಠ 10 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಬಹುದು ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ಬಾರಿ ನಿರ್ಮಲಾ ಸೀತಾರಾಮನ್ ಅವರು ಬರೋಬ್ಬರಿ 12 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಿ ಮಧ್ಯಮ ವರ್ಗದವರಿಗೆ ಬಂಪರ್ ಘೋಷಣೆ ಮಾಡಿದ್ದಾರೆ.
ಮುಂದಿನ ವಾರ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಲಿದ್ದಾರೆ. ಈ ಮಸೂದೆಯಲ್ಲಿ ಈ ವಿಚಾರದ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.
ಹೊಸ ತೆರಿಗೆ ಪದ್ಧತಿಯಡಿಯಲ್ಲಿ ವಾರ್ಷಿಕ 12 ಲಕ್ಷ ರೂ.ವರೆಗೆ ಆದಾಯ ಗಳಿಸುವವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಇದಕ್ಕೆ 75,000 ರೂ.ಗಳ ಪ್ರಮಾಣಿತ ಕಡಿತವನ್ನು ಸೇರಿಸಿದರೆ, ವಾರ್ಷಿಕ 12.75 ಲಕ್ಷ ರೂ.ವರೆಗಿನ ಆದಾಯ ಹೊಂದಿರುವ ತೆರಿಗೆದಾರರು ತೆರಿಗೆ ಕಟ್ಟುವಂತಿಲ್ಲ