ಕಲಬುರಗಿ: ಪ್ರತಿಯೊಬ್ಬರು ತಮ್ಮಿಂದ ಸಾಧ್ಯವಾದಷ್ಟು ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಬೇಕೆಂಬ ಮನೋಭಾವನೆ ಮೈಗೂಡಿಸಿಕೊಂಡರೆ ಸುಂದರ ಸಮಾಜ, ದೇಶ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಅಂತಹ ಅರ್ಥಪೂರ್ಣ ಜೀವನ ನಮ್ಮದಾಗಲಿ ಎಂದು ನೀಲೂರನ ಬಂಗಾರ ಜಡೆ ನೀಲಕಂಠೇಶ್ವರ ಹಿರೇಮಠದ ಪೂಜ್ಯ ಶರಣಯ್ಯ ಸ್ವಾಮಿ ಆಶಯ ವ್ಯಕ್ತಪಡಿಸಿದರು.
ನಗರದ ಅಫಜಲಪುರ ತಾಲೂಕಿನ ನೀಲೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಕಲಬುರಗಿಯ ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ‘ಶ್ರೀ ಸಾಯಿ ಪ್ರಸಾದ ಎಂಎಸ್’ಡಬ್ಲ್ಯೂ ಕಾಲೇಜ್’ನ ಸಮಾಜ ಕಾರ್ಯದ ಒಂದು ವಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀವರ್ಚನ ನೀಡಿದ ಅವರು, ಸ್ವಾರ್ಥ ಜೀವನ ಸಾಗಿಸಿದರೆ ಬದುಕಿಗೆ ಅರ್ಥವಿಲ್ಲ ಎಂದರು.
ವಿಶೇಷ ಉಪನ್ಯಾಸ ನೀಡಿದ ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ, ಎನ್’ಎಸ್’ಎಸ್ ಅಧಿಕಾರಿ ಎಚ್.ಬಿ ಪಾಟೀಲ ಮಾತನಾಡಿ, ಸಮಾಜದಲ್ಲಿರುವ ಜನರು ಹುಟ್ಟಿದ ವರ್ಗ, ಜಾತಿ, ಧರ್ಮ, ಪ್ರದೇಶ ಸೇರಿದಂತೆ ಮುಂತಾದವುಗಳ ಆಧಾರದ ಮೇಲೆ ಮೇಲು-ಕೀಳು ಮಾಡದೆ ಎಲ್ಲರೂ ಸಮಾನರು ಎಂಬ ಪರಿಕಲ್ಪನೆ ಸಾಮಾಜಿಕ ಸಮಾನತೆಯಾಗಿದೆ. ಸಂಪತ್ತಿನ ವಿಕೇಂದ್ರಿಕರಣ, ಕಾಯಕ ಪ್ರಜ್ಞೆಯಿಂದ ಆರ್ಥಿಕ ಸಮಾನತೆ ಸಾಧ್ಯವಾಗುತ್ತದೆ. ಪರಿಸರ ಸಂರಕ್ಷಣೆ, ಶೌಚಾಲಯಗಳ ನಿರ್ಮಾಣ ಹಾಗೂ ಬಳಕೆ, ಉತ್ತಮವಾದ ಚರಂಡಿ ವ್ಯವಸ್ಥೆ, ಗ್ರಾಮ ಸ್ವಚ್ಚತೆ, ಗಿಡಗಳನ್ನು ನೆಟ್ಟು ಬೆಳೆಸುವುದು ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ಶಿಬಿರಾರ್ಥಿಗಳು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಸಮಾಜ ಕಾರ್ಯ ಅಧ್ಯಯನವು ಪ್ರಾಯೋಗಿಕವಾದ ಕಾರ್ಯವಾಗಿದೆ. ಶಿಬಿರಾರ್ಥಿಗಳು ಈ ಕೋರ್ಸ್ನ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉನ್ನತವಾದ ಸಾಧನೆ ಮಾಡಬೇಕು ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಪ್ರಮುಖರಾದ ಅಸ್ಲಾಂ ಶೇಖ್, ಗುಂಡಣ್ಣ ಡಿಗ್ಗಿ, ಸುಮಿತ್ರಾ ಗಾಯಕವಾಡ, ಸುಜಯ್ ಎಸ್.ವಂಟಿ, ಹಣಮಂತರಾವ ಕೆ.ಪಾಟೀಲ, ಸಾತಲಿಂಗ ಪಾಟೀಲ, ರಾಮೇಶ್ವರ ಪಾಟೀಲ, ನಾಗಣ್ಣ ಠಕ್ಕಾ, ಉಮೇಶ್ ಗುತ್ತೇದಾರ, ಬಸವಲಿಂಗಪ್ಪ ಪಾಟೀಲ, ರಘನಾಥ ಸಿಂಗೆ, ಗಣಪತಿ ಜೋಗದನಕರ್, ದತ್ತಾತ್ರೇಯ ವಿ.ಬಿಲಕರ್ ಹಾಗೂ ಗ್ರಾಮಸ್ಥರು, ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಒಂದು ವಾರದ ಕಾಲ ಜರುಗಿದ ಶಿಬಿರದಲ್ಲಿ ಶ್ರಮದಾನ, ಸ್ವಚ್ಛತಾ ಕಾರ್ಯ, ಸಾಮಾಜಿಕ ಜಾಗೃತಿಯ ಕಿರು ನಾಟಕ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಆರೋಗ್ಯ ಅರಿವು, ಸ್ವಚ್ಚತೆ, ಯುವಕರ ಪಾತ್ರ, ಮಾನವೀಯ ಮೌಲ್ಯಗಳು, ಸಂವಿಧಾನದ ಪ್ರಸ್ತುತತೆ, ಕೃಷಿ, ಮಾಧ್ಯಮಗಳ ಪಾತ್ರ, ವಿಜ್ಞಾನ ಮತ್ತು ತಂತ್ರಜ್ಞಾ ವಿಷಯ ಕುರಿತು ವಿಶೇಷ ಉಪನ್ಯಾಸ ನೆರವೇರಿದವು.
ಕಾಲೇಜಿನ ಈ ಸಮಾಜಮುಖಿ ಕಾರ್ಯಕ್ಕೆ ಗ್ರಾಮಸ್ಥರ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು