ರಾಷ್ಟ್ರದ ಅಭಿವೃದ್ಧಿಗೆ ರಿಜರ್ವ ಬ್ಯಾಂಕ್‌ನ ಕೊಡುಗೆ ಅನನ್ಯ

ಜಿಲ್ಲೆ

ಕಲಬುರಗಿ: ಭಾರತೀಯ ರಿಜರ್ವ ಬ್ಯಾಂಕು ರಾಷ್ಟ್ರದ ಬ್ಯಾಂಕಾಗಿ ಹಣದುಬ್ಬರ ಹಾಗೂ ಹಣದಕುಸಿತದ ಸನ್ನಿವೇಶಗಳ ನಿರ್ವಹಣೆ, ಸಾಲ ನಿಯಂತ್ರಣ, ವಿದೇಶಿ ವಿನಿಮಯ ಪಾಲಕ, ಅಂತಿಮ ಸಾಲದಾತ, ತೀರುವೆ ಮನೆ ಕಾರ್ಯ, ಕೃಷಿ ಹಾಗೂ ಕೈಗಾರಿಗೆಳ ಅಭಿವೃದ್ಧಿಗಾಗಿ ಹಣಕಾಸಿನ ಸೌಲಭ್ಯ, ಸಂಶೋಧನೆ ಮತ್ತು ವಿಶೇಷ ಕಾರ್ಯಗಳು ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಅನನ್ಯವಾದ ಕೊಡುಗೆ ನೀಡುತ್ತಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಶಹಾಬಜಾ ಮಹಾದೇವ ನಗರಲ್ಲಿರುವ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಏರ್ಪಡಿಲಾಗಿದ್ದ ‘ಭಾರತೀಯ ರಿಜರ್ವ ಬ್ಯಾಂಕ್‌ನ 90ನೇ ಸಂಸ್ಥಾಪನಾ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ರಿಜರ್ವ ಬ್ಯಾಂಕು ಆಗಿನ ಬ್ರಿಟಿಷ ಸರ್ಕಾರ 1935ರ ಎಪ್ರೀಲ್-1 ರಂದು ಸ್ಥಾಪಿಸಿತು. ಸ್ವಾತಂತ್ರ್ಯದ ನಂತರ 1949ರ ಜನವರಿ-1 ರಂದು ರಾಷ್ಟ್ರಿಕರಣಗೊಳಿಸಲಾಯಿತು. ಆರ್‌ಬಿಐ ಹಣದ ಮೌಲ್ಯ ಕಾಪಾಡುತ್ತದೆ. ತನ್ನ ಹಣಕಾಸಿನ ನೀತಿಯ ಮೂಲಕ ರಾಷ್ಟçದ ಆಂತರಿಕ ಆರ್ಥಿಕ ಸ್ಥಿರತೆಯನ್ನು ತರುತ್ತದೆ ಎಂದರು.

ಆರ್‌ಬಿಐಯು, ನಬಾರ್ಡನ ಮೂಲಕ ಕೃಷಿ ಕ್ಷೇತ್ರ ಮತ್ತು ಗ್ರಾಮೀಣಾಭಿವೃದ್ಧಿಗೆ ಹಣಕಾಸಿನ ಸೌಲಭ್ಯ ಒದಗಿಸಿಕೊಡುತ್ತದೆ. ಇಎಫ್‌ಸಿ, ಎಸ್‌ಎಫ್‌ಸಿ, ಐಡಿಬಿಐ, ಯುಟಿಐನಂತಹ ಸಂಸ್ಥೆಗಳ ಮೂಲಕ ಕೈಗಾರಿಕೆಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ಮಾಡುತ್ತದೆ. ಹಣಕಾಸಿನ ಪೂರೈಕೆ, ಬ್ಯಾಂಕುಗಳ ಕಾರ್ಯಾಚರಣೆ, ಕೇಂದ್ರ ಮತ್ತು ರಾಜ್ಯ ಹಣಕಾಸಿನ ವಿಷಯ, ಸಂದಾಯ ಶಿಲ್ಕು ಸೇರಿದಂತೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಹೊಸ ಸಂಶೋಧನೆ ಮಾಡಿ, ಅದರ ಅಂಕಿ-ಅಂಶ, ಫಲಿತಾಂಶಗಳನ್ನು ವಿಶೇಷ ಹೊತ್ತಿಗೆಗಳ ಮೂಲಕ ಪ್ರಕಟಿಸುತ್ತದೆ. ರಿಜರ್ವ ಬ್ಯಾಂಕ್ ಸ್ಥಾಪನಗೆ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಶ್ರಮ ಮರೆಯುವಂತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕಿಯರಾದ ಶಿಲ್ಪಾ, ರಾಣಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *