ಭಾರತದಲ್ಲಿ ಹಲವು ಜನರಿಗೆ ನಿಧಿ ಸಿಕ್ಕಿದ ಉದಾಹರಣೆ ಇವೆ. ಎಷ್ಟೋ ಜನರು ನಿಧಿಗೋಸ್ಕರ ಅಪರಾಧ ಮಾಡಿ ಸಿಕ್ಕಿಬಿದ್ದಿದ್ದಾರೆ. ಆದರೆ ಇಲ್ಲೊರ್ವ ರೈತನಿಗೆ ಆತ ಇದ್ದಲ್ಲಿ ಅದೃಷ್ಟ ಎನ್ನುವದು ಒಂದಲ್ಲ, ಎರಡು ಬಾರಿ ಹುಡುಕಿಕೊಂಡು ಬಂದಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರಿದು ಡಿಸೆಂಬರ್ 2019ರ ಸುದ್ದಿಯಾಗಿದ್ದು, ಇದೀಗ ಪ್ರೆಶ್ ಸುದ್ದಿ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ.
ಲಾಟರಿಯಲ್ಲಿ ಬಂದ ಹಣದಿಂದ ಜಮೀನು ಖರೀದಿ
ಕೇರಳದ ಕಿಲಿಮನೂರಿನ 66 ವರ್ಷದ ರೈತ ಬಿ ರತ್ನಾಕರನ್ ಪಿಳ್ಳೈ ಅವರಿಗೆ 6 ಕೋಟಿ ರೂ ಲಾಟರಿ ಹಣ ಬಂದಿತ್ತು. 2019ರಲ್ಲಿ ಕ್ರಿಸ್ಮಸ್ ಲಾಟರಿಯಲ್ಲಿ 6 ಕೋಟಿ ರೂ ಗೆದ್ದರು. ಅದರಿಂದ ಜಮೀನು ಖರೀದಿ ಮಾಡಿದ್ದರು. ಐಷಾರಾಮಿ ಜೀವನ ಮಾಡುವ ಬದಲು, ಅವರು ತರಕಾರಿ ಕೃಷಿಯ ಒಲವು ಹೊಂದಿದ್ದರು, ಕೃಷಿ ಮಾಡಬೇಕು ಎಂದು ಜಮೀನು ಖರೀದಿ ಮಾಡಿದ್ದರು.
ನೂರು ವರ್ಷಗಳಿಗಿಂತ ಹಳೆಯದಾದ ಕಾಯಿನ್‌ಗಳು
ಲಾಟರಿ ಹಣದಿಂದ ಜಮೀನು ಖರೀದಿಸಿದ ನಂತರ ಹೊಸ ಜಮೀನು ಉಳುಮೆ ಮಾಡುತ್ತಿದ್ದರು. ಆಗ ಅವರಿಗೆ 2,595 ಪುರಾತನ ನಾಣ್ಯಗಳಿದ್ದ ಖಜಾನೆ ಸಿಕ್ಕಿದೆ. 20 ಕೆಜಿಗಿಂತಲೂ ಹೆಚ್ಚು ತೂಕದ ಮಣ್ಣಿನ ಕೊಡ ಇದಾಗಿದೆ. ತಜ್ಞರ ಪ್ರಕಾರ ಈ ನಾಣ್ಯಗಳು ತಿರುವಾಂಕೂರು ಮಹಾರಾಜರ ಕಾಲಕ್ಕೆ ಸೇರಿದವು ಎನ್ನಲಾಗಿದೆ. ಇದು ಕೇರಳದ ರಾಜಮನೆತನದ ಇತಿಹಾಸದ ಗುಪ್ತ ನಿಧಿಯಾಗಿತ್ತು. ಇದು ಒಂದು ಶತಮಾನಕ್ಕಿಂತ ಹೆಚ್ಚು ಹಳೆಯದೆಂದು ನಂಬಲಾದ ಈ ಕಂಚಿನ ನಾಣ್ಯಗಳು ಆ ಪ್ರದೇಶದ ಶ್ರೀಮಂತ ಇತಿಹಾಸವನ್ನು ತೋರಿಸುತ್ತವೆ.
ಅಧಿಕಾರಿಗಳಿಗೆ ಒಪ್ಪಿಸಿದ ರೈತ
ಈ ನಾಣ್ಯದಿಂದ ನಮ್ಮ ಕಾಲಡಿಯಲ್ಲಿ ಮರೆಯಾಗಿರುವ ಕಥೆಗಳು ಏನು ಎಂದು ಹೇಳುತ್ತದೆ. 1878ರ ಭಾರತೀಯ ಖಜಾನೆ ಕಾಯ್ದೆಯ ಪ್ರಕಾರ, ಇಂತಹ ಆಸ್ತಿಗಳು ಸರ್ಕಾರದ ಆಸ್ತಿಯೆಂದು ಪರಿಗಣಿಸಲ್ಪಡುತ್ತವೆ. ಕಾನೂನಿಗೆ ಬದ್ಧರಾಗಿ ಮತ್ತು ಮೌಲ್ಯಗಳಿಗೆ ತಕ್ಕಂತೆ ಪಿಳ್ಳೈ ಅವರು 1968ರ ಕೇರಳ ಟ್ರೆಷರ್ ಟ್ರೋವ್ ಕಾಯಿದೆಯಡಿ ಈ ನಿಧಿಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಮೂಲಕ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಶೋಧನೆಗಾಗಿ ಅವುಗಳ ಸಂರಕ್ಷಣೆ ಮಾಡಲಾಗುತ್ತದೆ. ಒಬ್ಬ ರೈತನ ಹೊಲವು ಮರೆತುಹೋಗಿದ್ದ ರಾಜವಂಶದ ಪರಂಪರೆಯ ದ್ವಾರವಾಯಿತು.
ನಿಧಿ ಬಗ್ಗೆ ಜನರು ಏನಂತಾರೆ ?
ನಿಧಿ ಬಗ್ಗೆ ಅನೇಕರು ಒಂದೊಂದು ರೀತಿಯಲ್ಲಿ ಮಾತನಾಡುತ್ತಾರೆ. ನಿಧಿ ಸಿಕ್ಕಾಗ ಆ ಹಣದಲ್ಲಿ ಮೂರು ಪಾಲು ಮಾಡಿ ಒಂದು ದೇವರಿಗೆ ಕೊಡಬೇಕು, ಉಳಿದವು ಸಮಾಜ ಸೇವೆ ಹಾಗೆ ನಮಗೆ ಇಟ್ಟುಕೊಳ್ಳಬೇಕು ಎಂದು ವಾಡಿಕೆಯಲ್ಲಿ ಹೇಳುವದಿದೆ. ಹೀಗಾಗಿ ನಿಧಿ ಸಿಕ್ಕರೂ ಕೆಲವರು ಬಳಸಲು ಯೋಚನೆ ಮಾಡುತ್ತಾರೆ. ಆದರೆ ಕಾನೂನಿನ ಪ್ರಕಾರ ಇದನ್ನು ಯಾರು ಇಟ್ಟುಕೊಳ್ಳುವ ಹಾಗಿಲ್ಲ, ಅಪರಾಧವಾಗುತ್ತದೆ.
ನಿಧಿಯನ್ನು ಕಾಯುವ ಸರ್ಪ
ಜ್ಯೋತಿಷ್ಯದ ಪ್ರಕಾರ ಎಲ್ಲರಿಗೂ ನಿಧಿ ಸಿಗುವದಿಲ್ಲ, ಯಾರಿಗೆ ನಿಧಿ ಸಿಗುವ ಯೋಗ ಇರುತ್ತದೆಯೋ ಅವರಿಗೆ ಮಾತ್ರ ಸಿಗುವುದು. ನಿಧಿ ಸಿಗುತ್ತದೆ ಎಂದರೆ ಮೊದಲೇ ಕೆಲ ಸೂಚನೆ ಕೂಡ ಇರುತ್ತವೆಯಂತೆ. ಚಿಕ್ಕಮಗಳೂರಿನಲ್ಲಿ ನಿಧಿ ಸಿಗುತ್ತೆ ಅಂತ ಆಳದ ಗುಂಡಿ ತೆಗೆದಿದ್ದರು. ಆಗ ಆ ಗುಂಡಿಗೆ ಕರಡಿಯೊಂದು ಬಂದು ಬಿದ್ದಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಿಧಿಯನ್ನು ಸರ್ಪಗಳು ಕಾಯುತ್ತವೆ ಎಂದು ಹೇಳಲಾಗುತ್ತದೆ. ಆ ನಿಧಿಗೆ ನಾವು ವಾರಸದಾರರು ಆಗಿಲ್ಲ ಎಂದರೆ ನಿಧಿಯ ಬಳಿ ಸರ್ಪ ಹೋಗಲು ಬಿಡುವದಿಲ್ಲ.