ಕಲಬುರಗಿ: ಜಗತ್ತಿನ ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣಿಕತೃವಾದ ಭೂಮಿಯು ಅನೇಕ ಕಾರಣಗಳಿಂದ ಗಂಡಾಂತರಕ್ಕೆ ಸಿಲುಕುವ ಮೂಲಕ ಜೀವರಾಶಿಗಳ ಬದುಕಿಗೆ ಅಪಾಯ ಉಂಟಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಜೀವಿಗಳಿಗೆ ಉಳಿಗಾಲವಿಲ್ಲ. ಆದ್ದರಿಂದ ಇರುವ ಒಂದೆ ಭೂಮಿಯ ಸಂರಕ್ಷಣೆ ಮಾಡುವದು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಉಪನ್ಯಾಸಕ, ಪರಿಸರ ಪ್ರೇಮಿ ಎಚ್.ಬಿ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಜರುಗಿದ ‘ವಿಶ್ವ ಭೂಮಿ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ಸೂರ್ಯನನ್ನು ಸುತ್ತುತ್ತಿರುವ ಗೃಹಗಳಲ್ಲಿ ಭೂಮಿಯು ಮೂರನೆ ಗೃಹವಾಗಿದೆ. ವಾಯು, ನೀರು, ನೆಲ ಹೊಂದಿರುವ ಜೀವಿಗಳು ವಾಸಿಸಲು ಯೋಗ್ಯವಾಗಿರುವ ಏಕೈಕ ಗೃಹ ನಮ್ಮದಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಮಾನವನ ದುರಾಸೆಯಂತಹ ಕಾರಣಗಳಿಂದ ಭೂಮಿಯು ಮಲಿನವಾಗಿದೆ. ಇದರಿಂದ ಜಾಗತಿಕ ತಾಪಮಾನ ಹೆಚ್ಚಾಗಿ, ಹಸಿರು ಮನೆ ಪರಿಣಾಮ, ಓಝೋನ ಪದರಿನ ನಾಶ, ಕುಡಿಯುವ ನೀರಿನ ಅಭಾವ, ಜೀವ ಸಂಕುಲದ ಮೇಲೆ ದುಷ್ಪರಿಣಾಮ, ಅರಣ್ಯಗಳ ಕ್ಷೀಣತೆ, ಭೂಮಿಯ ಗುಣಮಟ್ಟದ ಪ್ರಮಾಣ ಕಡಿಮೆಯಾಗುತ್ತಿರುವುದು, ಮಳೆಯ ಪ್ರಮಾಣ ಕುಸಿತವಾಗಿರುವದು ಸೇರಿದಂತೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿವೆ ಎಂದರು.
ಈ ದಿನವನ್ನು 1970ರ ಏ.21ರಂದು ಪ್ರಥಮ ಬಾರಿಗೆ ಆಚರಿಸಲಾಯಿತು. ಸಾವಯುವ ಕೃಷಿ ಅಗತ್ಯ. ಮಾಲಿನ್ಯ ನಿಯಂತ್ರಣ ಮಾಡಬೇಕು. ಸೌರಶಕ್ತಿ, ಪವನ ಶಕ್ತಿ, ಜೈವಿಕ ಶಕ್ತಿ ಸದುಪಯೋಗಪಡಿಸಿಕೊಳ್ಳಬೇಕು. ಹಸಿರು ಭೂಮಿ, ಸ್ವಚ್ಜ ಜಲ, ಶುದ್ಧ ಗಾಳಿ, ಸುಂದರ ಅರಣ್ಯ, ಸಮತೋಲನ ಹವಾಮಾನ ಅಗತ್ಯವಾಗಿದೆ. ಭೂಮಿ ಉಳಿದರೆ ಮಾತ್ರ ಎಲ್ಲಾ ಜೀವರಾಶಿಗಳು ಉಳಿಯಲು ಸಾಧ್ಯವಿದೆ ಎಂಬುದನ್ನು ಮರೆಯದೆ ಭೂಮಿಯ ಸಂರಕ್ಷಣೆಗೆ ಮುಂದಾಗೋಣ ಎಂದು ಮಾರ್ಮಿಕವಾಗಿ ಹೇಳಿದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಎಲ್ಲೆಡೆ ವ್ಯಾಪಕವಾಗಿ ಗಿಡಗಳನ್ನು ನೆಟ್ಟು ಪೋಷಿಸುವುದು, ಪ್ಲಾಸ್ಟಿಕ್, ರಾಸಾಯನಿಕಗಳ ಬಳಕೆ ನಿಷೇದ ಸೇರಿದಂತೆ ಮುಂತಾದ ಕ್ರಮಗಳನ್ನು ಕೈಗೊಂಡು ಭೂಮಿಯ ಸಂರಕ್ಷಣೆ ಮಾಡಬೇಕು. ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಸಂರಕ್ಷಣೆ ಪ್ರಜ್ಞೆ ಬೆಳೆಸಿಕೊಂಡು ಕಾರ್ಯನಿರ್ವಹಸಿಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ತರಬೇತಿ ಕೇಂದ್ರದ ಸಿಬ್ಬಂದಿ ಪೃತ್ವಿ ಕೋರವಾರ, ಪ್ರಮುಖರಾದ ಪ್ರಜ್ವಲ್, ವಿಶ್ವನಾಥ, ಮುಶ್ರಫ್, ಮಲ್ಲಿಕಾರ್ಜುನ, ಇಸ್ಮೈಲ್, ನೇಹಾ, ಪ್ರವೀಣ, ವಿರೇಶ್, ಆದಿತ್ಯ, ಅಬ್ರನ್, ಶ್ರೀಕಾರ, ಲಕ್ಷ್ಮಿಪುತ್ರ, ಅಭಿಶೇಕ್ ಸೇರಿದಂತೆ ಅನೇಕರು ಇದ್ದರು.