ಕಲಬುರಗಿ: ಕ್ಷಯರೋಗದ ವಿರುದ್ಧ ಹೋರಾಡಲು ಬಿಸಿಜಿ ಲಸಿಕೆ ಪಡೆಯುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು.
ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಜರುಗಿದ ‘ಟಿಬಿ ಸೋಲಿಸಿ, ದೇಶ ಗೆಲ್ಲಿಸಿ’ ಬಿಸಿಜಿ ಲಸಿಕಾಕರಣ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು, ಕಫದ ಜೊತೆಗೆ ರಕ್ತ ಕಾಣಿಸುವುದು, ವಿಶೇಷವಾಗಿ ರಾತ್ರಿ ಸಮಯದಲ್ಲಿ ಜ್ವರ ಬರುವುದು, ತೂಕದ ಇಳಿಕೆ, ರಾತ್ರಿ ವೇಳೆ ಬೆವರುವುದು, ಹಸಿವಾಗದಿರುವುದು ಕ್ಷಯರೋಗದ ಲಕ್ಷಣಗಳಾಗಿವೆ. ಆಗ ಇದರ ಬಗ್ಗೆ ನಿರ್ಲಕ್ಷ ಮಾಡದೆ ತಕ್ಷಣ ಟಿ.ಬಿ ಕಾಯಿಲೆಯ ಪರೀಕ್ಷೆ ಮಾಡಿಸಿಕೊಂಡು, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.
ಟಿಬಿ ಕಾಯಿಲೆ ಸಂಪೂರ್ಣವಾಗಿ ಗುಣಮುಖವಾಗುವಂತಹ ರೋಗವಾಗಿದೆ. 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಗಳಿಗೆ ಬಿಸಿಜಿ ಲಸಿಕೆ ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ನೀಡಲಾಗುತ್ತದೆ. ಇದನ್ನು ಟಿಬಿ ಇತಿಹಾಸ ಹೊಂದಿರುವ ವ್ಯಕ್ತಿ, ಟಿಬಿ ಇರುವ ವ್ಯಕ್ತಿಯ ನಿಕಟ ಸಂಪರ್ಕಿತರು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಅಪೌಷ್ಟಿಕ ವ್ಯಕ್ತಿಗಳು, ಪ್ರಸ್ತುತ ಅಥವಾ ಹಿಂದಿನ ಧೂಮಪಾನಿಗಳು, ಮಧುಮೇಹ ಹೊಂದಿರುವ ವ್ಯಕ್ತಿಗಳು ಬಿಸಿಜಿ ಲಸಿಕೆ ಪಡೆಯಬಹುದಾಗಿದೆ. ಓಬಿಯಿಂದ ರಕ್ಷಿಸಿಕೊಳ್ಳಲು ಉಚಿತವಾಗಿ ನೀಡುವ ಬಸಿಜಿ ಲಸಿಕೆ ಪಡೆಯಬೇಕು. 2030ಕ್ಕೆ ಟಿಬಿ ಮುಕ್ತ ಭಾರತ ಗುರಿಯ ಸಾಧನೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಎಚ್.ಬಿ ಪಾಟೀಲ, ಬಡಾವಣೆಯ ಹಿರಿಯ ನಾಗರಿಕ ಮಲ್ಲಿಕಾರ್ಜುನ ಗಣಜಲಖೇಡ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಗಂಗಾಜ್ಯೋತಿ ಗಂಜಿ, ಅರ್ಚನಾ ಸಿಂಗೆ, ಶ್ರಿದೇವಿ ಸಾಗರ, ಚಂದ್ರಕಲಾ ಮಠಪತಿ, ಸಂಗಮ್ಮ ಅತನೂರ, ಚಂದಮ್ಮ ಮರಾಠಾ, ಲಕ್ಷ್ಮಿ ಮೈಲಾರಿ, ಮಂಗಲಾ ಚಂದಾಪುರೆ, ನಾಗೇಶ್ವರಿ ಮುಗಳಿವಾಡಿ, ಗುರುರಾಜ ಕೈನೂರ, ಜಗನಾಥ ಗುತ್ತೇದಾರ, ಗಿರೀಶ್ ಮರಾಠಾ, ನಾಗಮ್ಮ ಚಿಂಚೋಳಿ ಸೇರಿದಂತೆ ಅನೇಕರು ಇದ್ದರು.