ಕೋಲಾರದಲ್ಲಿ ಏರ್‌ಬಸ್‌-ಟಾಟಾ ಕಾಪ್ಟರ್ ಘಟಕ: ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್‌ ಫ್ಯಾಕ್ಟರಿ

ರಾಷ್ಟೀಯ

ನವದೆಹಲಿ: ಯುರೋಪ್‌ನ ಅತಿದೊಡ್ಡ ವೈಮಾನಿಕ ಕಂಪನಿ ಏರ್‌ಬಸ್‌ ಹಾಗೂ ಟಾಟಾ ಸಮೂಹದ ಏರೋಸ್ಪೇಸ್‌ ವಿಭಾಗವಾಗಿರುವ ಟಾಟಾ ಅಡ್ವಾನ್ಸ್ಡ್‌ ಸಿಸ್ಟಮ್ಸ್‌ (ಟಿಎಎಸ್‌ಎಲ್‌) ಕಂಪನಿಗಳು ದೇಶದ ಮೊದಲ ಖಾಸಗಿ ಹೆಲಿಕಾಪ್ಟರ್‌ ಜೋಡಣೆ ಕಾರ್ಖಾನೆ ಸ್ಥಾಪನೆ ಮಾಡಲು ಕರ್ನಾಟಕದ ಕೋಲಾರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿವೆ.

ಬೆಂಗಳೂರಿನಿಂದ ಕೇವಲ 2 ತಾಸು ದೂರದಲ್ಲಿರುವ, ಕೋಲಾರದ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಈ ಘಟಕ ತಲೆ ಎತ್ತಲಿದೆ ಎಂದು ಅತ್ಯುನ್ನತ ಮೂಲಗಳು ತಿಳಿಸಿವೆ.

ಅತ್ಯಂತ ಪ್ರತಿಷ್ಠಿತವಾಗಿರುವ ಈ ಯೋಜನೆಯನ್ನು ಪಡೆಯಲು ಆಂಧ್ರಪ್ರದೇಶ, ಉತ್ತರಪ್ರದೇಶ ಹಾಗೂ ಗುಜರಾತ್‌ಗಳು ಕರ್ನಾಟಕಕ್ಕೆ ತುರುಸಿನ ಪೈಪೋಟಿ ನೀಡಿದ್ದವು. ಆದರೆ ಕರ್ನಾಟಕದಲ್ಲಿ ಈಗಾಗಲೆ ವೈಮಾಂತರಿಕ್ಷ ಉತ್ಪಾದನೆಗೆ ಸಂಬಂಧಿಸಿದ ಕಂಪನಿಗಳು ಇರುವ ಕಾರಣಕ್ಕೆ ಏರ್‌ಬಸ್‌-ಟಾಟಾ ಕಂಪನಿಗಳು ಕರ್ನಾಟಕವನ್ನೆ ಆಯ್ಕೆ ಮಾಡಿಕೊಂಡಿವೆ.

ವಿಶ್ವದಲ್ಲಿ ಏರ್‌ಬಸ್‌ ಕಂಪನಿಯು ಫ್ರಾನ್ಸ್‌, ಅಮೆರಿಕ ಹಾಗೂ ಬ್ರೆಜಿಲ್‌ನಲ್ಲಿ ಮಾತ್ರ ಘಟಕ ಹೊಂದಿದೆ ಈಗ ಕೋಲಾರ ನಾಲ್ಕನೇ ಘಟಕವಾಗಿದೆ. ಭಾರತೀಯ ವಾಯುಪಡೆಗಾಗಿ ಈ ಎರಡೂ ಕಂಪನಿಗಳು ಜತೆಗೂಡಿ ಎಚ್‌125 ಹೆಲಿಕಾಪ್ಟರ್‌ಗಳ ಅಂತಿಮ ಜೋಡಣಾ ವಿಭಾಗವನ್ನು ಕೋಲಾರದಲ್ಲಿ ತೆರೆಯಲಿವೆ ಎಂದು ವರದಿಗಳು ತಿಳಿಸಿವೆ.

ವಾರ್ಷಿಕ 10 ಹೆಲಿಕಾಪ್ಟರ್‌ಗಳನ್ನು ಆರಂಭಿಕ ಹಂತದಲ್ಲಿ ಉತ್ಪಾದಿಸಲಾಗುತ್ತದೆ. ಮುಂದಿನ 2 ದಶಕಗಳಲ್ಲಿ 500 ಲಘು ಹೆಲಿಕಾಪ್ಟರ್‌ಗಳಿಗೆ ಭಾರತ ಹಾಗೂ ದಕ್ಷಿಣ ಏಷ್ಯಾದಲ್ಲಿ ಬೇಡಿಕೆ ಬರಬಹುದು ಎಂದು ಏರ್‌ಬಸ್‌ ಅಂದಾಜಿಸಿದೆ.

Leave a Reply

Your email address will not be published. Required fields are marked *