ಚಿತ್ತಾಪುರ: ತಾಲೂಕಿನ ಗುಂಡಗುರ್ತಿ ಗ್ರಾಮದ ಬಳಿ ಜನಾಕರ್ಷಕ ಲುಂಬಿನಿ ಉದ್ಯಾನವನವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, 10 ಎಕರೆ ವಿಸ್ತಾರದ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಡಿಎಂಎಫ್ ಅನುದಾನ ಅಂದಾಜು1.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಯಾನವನ ವಿವಿಧ ಬಗೆಯ ಸೌಲಭ್ಯಗಳಿಂದ ಜನರನ್ನು ಆಕರ್ಷಿಸುತ್ತದೆ ಎಂದರು.
ಮಿಯಾವಾಕಿ ಅರಣ್ಯ, ಚಿಟ್ಟೆ ಪಾರ್ಕ್, ಮರದ ಸೇತುವೆ, ಕಾರಂಜಿ, ವಿವಿಧ ಬಗೆಯ ಗಿಡಗಳು, ಹಸಿರು ಹುಲ್ಲಿನ ಹೊದಿಕೆ, ಮಕ್ಕಳ ಆಟದ ಸಾಮಾಗ್ರಿಗಳು, ವಾಟರ್ ಫಾಲ್ಸ್ ಸೇರಿದಂತೆ ಇತ್ಯಾದಿ ಉದ್ಯಾನವನದ ಪ್ರಮುಖ ಆಕರ್ಷಣೆಯಾಗಿವೆ ಎಂದರು.
ಚಿತ್ತಾಪುರ ತಾಲೂಕಿನ ಜನರ ಮನೋರಂಜನೆಗಾಗಿ ಹಾಗೂ ವಾರದ ಕೊನೆಯ ದಿನ ಮಕ್ಕಳ ಆಟೋಪೋಹಾರಕ್ಕಾಗಿ ಸುಸಜ್ಜಿತ ಉದ್ಯಾನವನದ ಸ್ಥಾಪನೆ ಮಾಡಲಾಗಿದೆ. ವಿಭಿನ್ನ ಪ್ರಭೇದದ ಚಿಟ್ಟೆಗಳು ಹಾಗೂ ಮರಗಿಡಗಳು ಹಾಗೂ ಹಚ್ಚ ಹಸಿರಿನ ಹುಲ್ಲು ಮನಸಿಗೆ ಉಲ್ಲಾಸವನ್ನುಂಟು ಮಾಡುತ್ತವೆ ಎಂದರು.
ಉದ್ಯಾನವನ ನಿರ್ಮಾಣದ ಪ್ರಮುಖ ಉದ್ದೇಶ ಪ್ರವಾಸಿಗರನ್ನು ಆಕರ್ಷಿಸುಸುವುದರ ಜೊತೆಗೆ ಪುಸ್ತಕ ಪ್ರೇಮಿಗಳಿಗೆ ನೆಚ್ಚಿನ ತಾಣವನ್ನಾಗಿ ಮಾಡುವುದಾಗಿದೆ, ಇದಕ್ಕೆ ಅಧಿಕಾರಿಗಳು ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಮಕ್ಕಳು ಹಾಗೂ ಮಹಿಳೆಯರು ಮತ್ತು ಪರಿಸರ ಪ್ರೇಮಿಗಳು ಹಸಿರು ತುಂಬಿದ ಉದ್ಯಾನವನದಲ್ಲಿ ಸಂತಸದ ಕ್ಷಣಗಳನ್ನು ಕಳೆಯುತ್ತಾರೆ. ಪುಸ್ತಕ ಪ್ರೇಮಿಗಳಿಗೆ ಗ್ರಂಥಾಲಯ ಕೂಡಾ ಸ್ಥಾಪಿಸಲಾಗಿದೆ. ಇದು ಓದುಗರಿಗೆ ಜ್ಞಾನಾರ್ಜನೆ ಮಾಡಿಕೊಳ್ಳುವ ತಾಣವಾಗಲಿದೆ. ಇಲ್ಲಿಗೆ ಬರುವವರು ಸಿಬ್ಬಂದಿಗಳೊಂದಿಗೆ ಸಹಕರಿಸಿ ಸ್ವಚ್ಛತೆ ಕಾಪಾಡಲು ಅನುವು ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಎಂಎಲ್’ಸಿಗಳಾದ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ, ಎಸ್ಪಿ ಅಡ್ಡರು ಶ್ರೀನಿವಾಸಲು, ಸೇಡಂ ಸಹಾಯಕ ಆಯ್ತುಕ್ತ ಪ್ರಭು ರೆಡ್ಡಿ, ತಹಸೀಲ್ದಾರ್ ನಾಗಯ್ಯ ಹಿರೇಮಠ, ಪ್ರಮುಖರಾದ ಭೀಮಣ್ಣ ಸಾಲಿ, ರಮೇಶ ಮರಗೋಳ, ಶಿವಾನಂದ ಪಾಟೀಲ್, ಸುನೀಲ ದೊಡ್ಡಮನಿ, ಮುಕ್ತಾರ
ಪಟೇಲ್, ಮನ್ಸೂರ್ ಪಟೇಲ್, ಬಸವರಾಜ ಹೊಸಳ್ಳಿ,
ಯಲ್ಲಾಲಿಂಗ ಮುಗಟಿ, ಅಶೋಕ ವೀರನಾಯಕ, ಮಲ್ಲಪ್ಪ
ಹೊಸನಿ ಇಂಗನಕಲ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.