ಮುಕ್ತ ಪತ್ರಿಕೋದ್ಯಮಕ್ಕೆ ಬೆಂಬಲ ನೀಡುವುದು ಅಗತ್ಯ: ಎಚ್.ಬಿ ಪಾಟೀಲ

ಜಿಲ್ಲೆ

ಕಲಬುರಗಿ: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಚಟುವಟಿಕೆ ಬಗ್ಗೆ ನಿಗಾ ವಹಿಸಿ, ದೇಶದ ಸಮಸ್ಯೆಗಳ ಬಗ್ಗೆ ಮೇಲಿಂದ ಮೇಲೆ ಬೆಳಕು ಚೆಲ್ಲಿ, ಅದಕ್ಕೆ ಪರಿಹಾರ ಹುಡುಕುವಂತೆ ಮಾಡಿ ಸ್ವಸ್ಥ, ಸಧೃಢ ರಾಷ್ಟ್ರ ನಿರ್ಮಾಣಕ್ಕೆ ‘ಮಾಧ್ಯಮ ರಂಗ’ ತನ್ನದೆಯಾದ ಅದ್ವಿತೀಯ ಕೊಡುಗೆಯನ್ನು ನೀಡುತ್ತಿದೆ. ಸಮಾಜಕ್ಕೆ ಸ್ವತಂತ್ರ, ನಿರ್ಭೀತ, ನ್ಯಾಯಯುತ ಪತ್ರಿಕೋದ್ಯಮ ಅಗತ್ಯ. ಪತ್ರಿಕೋದ್ಯಮವು ಮುಕ್ತವಾಗಿ ಕಾರ್ಯನಿರ್ವಹಿಸಲು ಬೆಂಬಲ ನೀಡುವುದು ಅವಶ್ಯಕ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಮತ ವ್ಯಕ್ತಪಡಿಸಿದರು.

ನಗರದ ಖಾದ್ರಿ ಚೌಕ್‌ನಲ್ಲಿನ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ಅಂತರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರದ ಹಿತ ಬಂದಾಗ, ನ್ಯಾಯ ಒದಗಿಸಿಕೊಡಲು ಪತ್ರಕರ್ತರಿಗೆ ಧೈರ್ಯ, ನಿರ್ಭೀತಿಯಿಂದ ಬರೆಯಲು ಪೂರಕವಾದ ವಾತಾವರಣ ಅಗತ್ಯ. ಸಮಾಜದ ಒಳಿತಿಗಾಗಿ ಹರಿತವಾದ ಬರವಣಿಗೆಯ ಮೂಲಕ ನ್ಯಾಯ ಒದಗಿಸಿಕೊಟ್ಟು, ಪ್ರಾಣತ್ಯಾಗ ಮಾಡಿದ ಪತ್ರಕರ್ತರನ್ನು ಮರೆಯುವಂತಿಲ್ಲ. ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು, ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡುವ ಮೂಲಕ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಲ್ಲಿ ಮಾಧ್ಯಮಗಳು ಮೊದಲಿನಿಂದಲೂ ಕಾರ್ಯನಿರ್ವಹಿಸುತ್ತಿವೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *