ಭಾಗ್ಯಲಕ್ಷ್ಮಿ ಯೋಜನೆಗೆ ಕುತ್ತು ತಂದ ಬಾಲ್ಯ ವಿವಾಹ: ಯಾದಗಿರಿಯಲ್ಲಿ 189 ಫಲಾನುಭವಿಗಳಿಗೆ ಸೌಲಭ್ಯ ಅನುಮಾನ

ಜಿಲ್ಲೆ

ಸುದ್ದಿ ಸಂಗ್ರಹ ಯಾದಗಿರಿ
ಜಿಲ್ಲೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ನೋಂದಣಿ ಮಾಡಿಕೊಂಡು ಬಾಂಡ್‌ ಪಡೆದಿರುವ 189 ಫಲಾನುಭವಿಗಳಿಗೆ ಬಾಲ್ಯ ವಿವಾಹವಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಇಷ್ಟು ಫಲಾನುಭವಿಗಳು ಸರಕಾರದ ಯೋಜನೆಯ ಆರ್ಥಿಕ ಸೌಲಭ್ಯದಿಂದ ವಂಚಿತರಾಗುವಂತಾಗಿದೆ. ಅಲ್ಲದೆ ಕಾನೂನಿನ ಸಂಕಷ್ಟ ಎದುರಿಸುವ ಭೀತಿಯೂ ಶುರುವಾಗಿದೆ.

ಕರ್ನಾಟಕದಲ್ಲಿ 2006-07ನೇ ಸಾಲಿನಲ್ಲಿ ಜಾರಿಗೊಳಿಸಿದ ಭಾಗ್ಯಲಕ್ಷ್ಮಿ ಯೋಜನೆಯಡಿ ಮೊದಲನೆಯ ವರ್ಷವೇ ನೋಂದಣಿಯಾಗಿರುವ ಫಲಾನುಭವಿಗಳಿಗೆ ನೀಡಿರುವ ಬಾಂಡ್‌ಗಳಿಗೆ ಈ ವರ್ಷ ಮೆಚುರಿಟಿ (ಪರಿಪಕ್ವ) ಆಗಿರುವುದರಿಂದ ಫಲಾನುಭವಿಗಳಿಗೆ ಮೆಚುರಿಟಿ ಹಣ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಆದ್ದರಿಂದ ಈ ಯೋಜನೆಯ ಅರ್ಹ ಫಲಾನುಭವಿಗಳು ನಿಗದಿಪಡಿಸಿದ ದಾಖಲೆಗಳು ಸಲ್ಲಿಸಿ ಆರ್ಥಿಕ ಸೌಲಭ್ಯ ಪಡೆಯಬೇಕಾಗಿದೆ. ಹೀಗಾಗಿ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳು ಬಾಲ್ಯ ವಿವಾಹ ಆಗಿರುವ ವಿಷಯ ಗೊತ್ತಾಗಿದೆ.

ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರ ಹಾಗೂ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ತಿಳಿದು, ತಿಳಿಯದೆಯೂ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೂ ಒಳಗಾಗುತ್ತಿದ್ದಾರೆ. ಉನ್ನತ ವ್ಯಾಸಂಗ ಮಾಡಿ ಉಜ್ವಲ ಭವಿಷ್ಯ ಕಂಡುಕೊಳ್ಳಬೇಕಾದ ಅದೆಷ್ಟೋ ಬಾಲಕಿಯರು ಬಾಲ್ಯ ವಿವಾಹದ ಸಾಮಾಜಿಕ ಪಿಡುಗಿಗೆ ಬಲಿಯಾಗಿ ಸಂವಿಧಾನಬದ್ಧ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ.

ಬಾಲ್ಯ ವಿವಾಹ ನಿಷೇಧ ಕಾಯಿದೆ ಹಾಗೂ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗೆ ಪೋಕ್ಸೋ ಕಾಯಿದೆ ಜಾರಿಯಲ್ಲಿದ್ದರೂ ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಿಯರು ಗರ್ಭಧರಿಸುವಂತಹ ಪ್ರಕರಣಗಳು ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕಾದ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್‌ ಇಲಾಖೆ ಒಳಗೊಂಡು ಸಂಬಂಧಿತ ಇಲಾಖೆಗಳು ವಿಫಲವಾಗುತ್ತಿವೆ.

ಮಕ್ಕಳ ವಿಷಯದಲ್ಲಿ ಇಡಿ ಸಮಾಜವೇ ತಲೆತಗ್ಗಿಸುವಂತಹ ಕೆಟ್ಟ ಘಟನೆಗಳಿಗೆ ಈ ಜಿಲ್ಲೆ ಹಲವು ಬಾರಿ ಹೆಸರಾಗುತ್ತಿದೆ. ಆದರೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಯಥೇಚ್ಛವಾಗಿ ನಡೆಯುತ್ತಿದ್ದರೂ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ಮಕ್ಕಳ ವಿಷಯದಲ್ಲಿ ಸೂಕ್ಷ್ಮತೆ ಅರಿತುಕೊಂಡು ಕೆಲಸ ಮಾಡಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಮಾಜವೇ ಬಾಲ್ಯ ವಿವಾಹಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ದುರಂತವೇ ಸರಿ.

ಕೆಲವು ಜಿಲ್ಲೆಗಳಲ್ಲಿ ಭಾಗ್ಯಲಕ್ಷ್ಮಿ ಕಂತು ಫಲಾನುಭವಿಗಳ ಬ್ಯಾಂಕ್ ಅಕೌಂಟ್‌ಗೆ ಜಮೆಯಾಗಿದ್ದು, ಯಾದಗಿರಿಯಲ್ಲಿ ನಿಯಮ ಪಾಲನೆ ದೃಷ್ಟಿಯಲ್ಲಿ ಯೋಜನೆಯ ಅರ್ಹ ಫಲಾನುಭವಿಗಳ ಪರಿಶೀಲನೆ ನಡೆಯುತ್ತಿದೆ.

Leave a Reply

Your email address will not be published. Required fields are marked *