ಕಲಬುರಗಿ: ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ ಹೋರಾಟಕ್ಕೆ ಸಂಪೂರ್ಣವಾಗಿ ಕೈಜೋಡಿಸುವ ಮೂಲಕ ತಮ್ಮದೆಯಾದ ಅಮೂಲ್ಯ ಸೇವೆ ಸಲ್ಲಿಸಿದ ಸ್ವಾತಂತ್ರ್ಯ ಹೋರಾಟದ ವೀರ ಮಹಿಳೆಯಾಗಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ, ಸಂತೋಷ ಕಾಲೋನಿ ಕ್ರಾಸ್ ಸಮೀಪದ ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಶುಕ್ರವಾರ ಜರುಗಿದ ‘ಕಸ್ತೂರಬಾ ಗಾಂಧೀಜಿಯವರ 156ನೇ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಸ್ತೂರಬಾ ಅವರು ರಾಷ್ಟ್ರಪತಿ ಗಾಂಧೀಜಿವರ ಪತ್ನಿ ಮಾತ್ರವಲ್ಲದೆ ಸ್ವಾತಂತ್ರ್ಯ ಆಂದೋಲದಲ್ಲಿ ಭಾಗವಹಿಸಿದ ಸ್ವಾತಂತ್ರ್ಯ ಸೇನಾನಿಯಾಗಿದ್ದಾರೆ. ಸೇವಾಗ್ರಾಮದ ಆಶ್ರಮವಾಸಿಗಳಿಗೆ, ಮಹಿಳಾ ಚಳುವಳಿಗಾರರಿಗೆ ಮಾತೃಸ್ಥಾನದಲ್ಲಿ ನಿಂತು ಮಹಿಳೆಯರಿಗೆ ಧೈರ್ಯ ನೀಡಿ, ಸೈನಿಕರಂತೆ ಸೇವೆ ಸಲ್ಲಿಸಿದರು ಎಂದರು.
ದಕ್ಷಿಣ ಆಫ್ರಿಕಾದಲ್ಲಿ ಎಲ್ಲೆಡೆ ಪ್ಲೇಗ್ ರೋಗ ಹರಡಿದಾಗ ಕಸ್ತೂರಬಾ ಅವರು ಅಲ್ಲಿನ ಮನೆ-ಮನೆಗೆ ತೆರಳಿ ಮಹಿಳೆಯರಿಗೆ ಸ್ವಚ್ಚತೆ ಬಗ್ಗೆ ಜಾಗ್ರತೆ ಮೂಡಿಸಿ, ವೈದ್ಯಕೀಯ ನೆರವನ್ನು ಒದಗಿಸುತ್ತಾರೆ. ಜೋಹಾನ್ಸ್’ಬರ್ಗ್’ನಲ್ಲಿ ಜಾತಿಯತೆ ಅಳಿಸಿ ಹಾಕಲು ಶ್ರಮಿಸಿದರು. ಭಾರತಕ್ಕೆ ಮರಳಿ ಸಬರಮತಿ ಆಶ್ರಮದಲ್ಲಿ ಸೇವೆಯಲ್ಲಿ ತೊಡಗಿದರು. ಸದಾ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಖಾದಿ ಉಪಯೋಗ ಚಲಾವಣೆಗೆ ಮಹಾತ್ಮ ಗಾಂಧೀಜಿಯವರು ತಂದರೆ, ಇವರನ್ನು ಪ್ರಚಾರಪಡಿಸಿದವರು ಕಸ್ತೂರಬಾರವರಾಗಿದ್ದಾರೆ. ಅನೇಕ ಮಹಿಳೆಯರಿಗೆ ನೂಲನ್ನು ನೆಯವುದು ಕಲಿಸಿಕೊಟ್ಟರು. ಇದರಿಂದ ಸ್ವ- ಉದ್ಯೋಗ ದೊರೆತು, ಸ್ವಾವಲಂಬನೆಯುತ ಜೀವನ ಸಾಗಿಸಲು ಅವರು ಪ್ರೇರಣೆ ನೀಡಿದರು ಎಂದು ನುಡಿದರು.
ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್ ಮಾತನಾಡಿ, ಕಸ್ತೂರಬಾ ಗಾಂಧಿಯವರು ಸಂಪ್ರದಾಯಸ್ಥ ಮತ್ತು ಮೃದು ಸ್ವಭಾವ. ಆದರೆ ಮಹಾ ಸ್ವಾಭಿಮಾನಿಯಾಗಿದ್ದರು. ಇವರು ಗಾಂಧಿಜೀವರು ಜೊತೆಯಲ್ಲಿ ನೆರಳನಂತಿದ್ದರು. ಒಬ್ಬೊರೊಬ್ಬರನ್ನು ಬಿಟ್ಟಿರುತ್ತಿರಲಿಲ್ಲ. ಅಪರಿಗ್ರಹ ವ್ರತವನ್ನು ಸ್ವೀಕರಿಸಿದ್ದ ಗಾಂಧೀಜಿವರು ತಮ್ಮ ವೈಯಕ್ತಿಕ ವಸ್ತುಗಳನ್ನು ದಾನ ಮಾಡಲು ಹೇಳಿದ್ದಾಗ, ಕಸ್ತೂರಬಾ ಅವರು ಸಮಾಜಕ್ಕೆ ಎಲ್ಲಾವನ್ನು ದಾನ ಮಾಡಿದರು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಸಮಾಜ ಸೇವಕ ಡಾ.ರಾಜಶೇಖರ ಪಾಟೀಲ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.