ಕಲಬುರಗಿ: ಬೇವು-ಬೆಲ್ಲ ಸವಿಯುವ ವಿಶೇಷತೆಯ ಯುಗಾದಿ ಹಬ್ಬವು ಜೀವನದಲ್ಲಿ ಬರುವ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಮಭಾವದ ಮೇರು ಸಂದೇಶ ಹೊಂದಿದೆ. ಪ್ರತಿಯೊಬ್ಬರು ಪ್ರಯತ್ನಶೀಲರಾಗಿದ್ದರೆ ಉನ್ನತ ಸಾಧನೆ ಮಾಡಲು ಸಾಧ್ಯ, ಕಷ್ಟಗಳನ್ನು ಮೆಟ್ಟಿನಿಲ್ಲಬೇಕು ಎಂಬ ಜೀವನದ ಸಾರ ಸಂದೇಶ ಸಾರುವ ಭಾರತೀಯರ ಹೊಸ ವರ್ಷ ಯುಗಾದಿಯಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಅಭಿಮತಪಟ್ಟರು.
ನಗರದ ಡಬರಾಬಾದ ಕ್ರಾಸ್ ಸಮೀಪದ ಪ್ರಭುದೇವ ನಗರದ ಬಡಾವಣೆ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಹೊಸ ವರ್ಷ ಯುಗಾದಿ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನ ದೇಶವಾಗಿದೆ. ರೈತರು, ಶ್ರಮಜೀವಿಗಳು ವರ್ಷದ ಕೊನೆಯಲ್ಲಿ ಚಟುವಟಿಕೆಗಳನ್ನು ಮುಗಿಸಿ, ಆ ವರ್ಷಕ್ಕೆ ವಿದಾಯ ಹೇಳಿ, ಮುಂದಿನ ವರ್ಷವನ್ನು ಸ್ವಾಗಿಸುವ ದಿನ ಇದಾಗಿದೆ. ಸೂಕ್ತ ಕಾಲಕ್ಕೆ ಮಳೆಯಾಗಿ, ಉತ್ತಮ ಫಸಲು ಪಡೆದು ರೈತ ಸದೃಢನಾಗಬೇಕು. ಭಾರತೀಯರ ನಿಜವಾದ ಹೊಸ ವರ್ಷಾಚರಣೆ ಎಂದರೆ ಯುಗಾದಿ ಹೊರತು ಕ್ಯಾಲೆಂಡರ್ ವರ್ಷದ ‘ಜನವರಿ-1’ ಅಲ್ಲ. ಯುಗಾದಿ ಕೇವಲ ಹೊಸ ವರ್ಷಾಚರಣೆ ಹಬ್ಬವಾಗದೆ, ಶ್ರೇಷ್ಠ ಸಂಸ್ಕೃತಿ, ಉನ್ನತ ಮೌಲ್ಯಗಳನ್ನು ಹೊಂದಿದೆ. ನಮ್ಮ ದೇಶದ ಹಬ್ಬಗಳು ನಿಸರ್ಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ವಿಶೇಷತೆಯಾಗಿದೆ. ಇಂತಹ ಹಬ್ಬಗಳ ಆಚರಣೆಯ ಹಿನ್ನಲೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಬಡಾವಣೆಯ ಅಧ್ಯಕ್ಷ ಪ್ರಭು ಪಾಣೆಗಾಂವ, ಚಿಂತಕ ಡಾ.ರಾಜಶೇಖರ ಪಾಟೀಲ ಹೆಬಳಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ನಿವೃತ್ತ ಶಿಕ್ಷಕ ಚಂದ್ರಕಾಂತ ಬಿರಾದಾರ, ಬಡಾವಣೆಯ ಪಂಡಿತರಾವ ಪಾಟೀಲ, ಸಂಗಮೇಶ ಕಡಗಂಚಿ, ಮಲ್ಲಿಕಾರ್ಜುನ ಪಾಟೀಲ, ಮಲ್ಲಿಕಾರ್ಜುನ ಮೇತ್ರೆ, ದತ್ತು ರೇವೂರ, ಡಾ.ಬಸವರಾಜ ವಾಡಿ, ಬಸವರಾಜ ಕೊರಳ್ಳಿ, ನಾಗೇಂದ್ರಪ್ಪ ಬಿರಾದಾರ, ಸಾತಲಿಂಗಪ್ಪ ಖಸಗಿ, ಮಲ್ಲಿಕಾರ್ಜುನ ಲಿಂಗದಳ್ಳಿ, ಅಣವೀರಯ್ಯ ಮಠಪತಿ, ದುಂಡಪ್ಪ ವಗ್ಗಾಲೆ, ಆದರ್ಶ, ಪ್ರತೀಕ್, ಸಮೃದ್ಧ, ನಿತೀಶ್, ಸಾತ್ವಿಕ, ಕಾರ್ತಿಕ ಸೇರಿದಂತೆ ಅನೇಕರು ಇದ್ದರು.