ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಮುಂಜಾಗೃತೆ ವಹಿಸುವುದು ಅಗತ್ಯ

ಜಿಲ್ಲೆ

ಕಲಬುರಗಿ: ಕೇಂದ್ರ ನರಮಂಡಲದ ಮೇಲೆ ದುಷ್ಪರಿಣಾಮ ಬೀರುವ ಮೂಲಕ ಮೆದಳು, ದೇಹದ ಚಲನೆಗೆ ತೊಂದರೆ ಉಂಟು ಮಾಡುತ್ತದೆ. ಕೈಕಾಲು ಜೋಮು ಹಿಡಿಯುವುದು, ನಿಲ್ಲಲು ಹಾಗೂ ನಡೆಯಲು ಆಯಾಸವಾಗುವದು, ನಿದ್ರಾಹೀನತೆ, ಮಾತಿನಲ್ಲಿ ಬದಲಾವಣೆ, ಮೂಗಿನ ಕಾರ್ಯದಲ್ಲಿ ತೊಂದರೆ, ಮೂತ್ರ ಸೋರುವಿಕೆಯಂತಹ ಲಕ್ಷಣಗಳು ಪಾರ್ಕಿನ್ಸನ್ ಕಾಯಿಲೆಯದಾಗಿದೆ, ಇದರ ಬಗ್ಗೆ ಮುಂಜಾಗೃತೆ ವಹಿಸುವುದು ಅಗತ್ಯ ಎಂದು ಹಿರಿಯ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಸಲಹೆ ನೀಡಿದರು.

ನಗರದ ಆಳಂದ ರಸ್ತೆಯ, ಸಂತೋಷ ಕಾಲೋನಿ ಕ್ರಾಸ್ ಸಮೀಪದ ಬಸವಗಂಗಾ ಕ್ಲಿನಿಕ್’ನಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ವಿಶ್ವ ಪಾರ್ಕಿನ್ಸನ್ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಅನುವಂಶೀಯತೆ, ಪರಿಸರದ ಅಂಶಗಳು, ವಯಸ್ಸು, ಅತಿಯಾದ ಒತ್ತಡ, ಅನಾರೋಗ್ಯಕರ ಜೀವಶೈಲಿ, ಜಡತ್ವ ಸೇರಿದಂತೆ ಇನ್ನಿತರ ಕಾರಣಗಳಿಂದ ಪಾರ್ಕಿನ್ಸನ್ ಕಾಯಿಲೆ ಬರುತ್ತದೆ ಎಂದರು.

ಪಾರ್ಕಿನ್ಸನ್ ಕಾಯಿಲೆ ಬರದಂತೆ ಮುಂಜಾಗ್ರತೆಯ ಕ್ರಮವಾಗಿ ನಿಯಮಿತ ವ್ಯಾಯಾಮ, ಯೋಗ, ಧ್ಯಾನ ಮಾಡಬೇಕು. ಸಮತೋಲಿತ ಆಹಾರ, ಶುದ್ದವಾದ ನೀರು ಸೇವಿಸಬೇಕು. ಒತ್ತಡಕ್ಕೆ ಒಳಗಾಗಬಾರದು. 7-8 ಗಂಟೆಯ ಕಾಲ ಗಾಡವಾದ ನಿದ್ರೆ, ಧನಾತ್ಮಕ ಚಿಂತನೆ, ಮದ್ಯಪಾನ, ಧೂಮಪಾನ, ಗುಟಕಾದಂತಹ ದುಶ್ಚಟಗಳಿಂದ ದೂರವಿರಬೇಕು. ಕಾಯಿಲೆ ಬಂದ ನಂತರ ತಜ್ಞ ವೈದ್ಯರನ್ನು ಭೇಟಿಯಾಗಿ ಸಂಬಂಧಿತ ಚಿಕಿತ್ಸೆ ಪಡೆಯಬೇಕು. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕ ಎಚ್.ಬಿ.ಪಾಟೀಲ, ಸದಸ್ಯರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ದತ್ತು ಹಡಪದ, ಕ್ಲಿನಿಕ್‌ನ ಸಿಬ್ಬಂದಿಗಳಾದ ಮಹೇಶ ಕೋಡ್ಲಿ, ಸುಭಾಷ ಕೇಶ್ವಾರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *