ಶಾಂತಿ, ಅಹಿಂಸೆಯ ಸಾಕಾರಮೂರ್ತಿ ವರ್ಧಮಾನ ಮಹಾವೀರ

ಜಿಲ್ಲೆ

ಕಲಬುರಗಿ: ಶಾಂತಿ, ತ್ಯಾಗ, ಅಹಿಂಸೆ, ಭ್ರಾತೃತ್ವ ಭಾವನೆ ಎಲ್ಲರಲ್ಲಿಯೂ ಮೂಡಿಸಿ, ಅದರಂತೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮಾಜ ಸುಧಾರಣೆಗಾಗಿ ಶ್ರಮಿಸಿದ ವರ್ಧಮಾನ ಮಹಾವೀರರ ಕೊಡುಗೆ ಪ್ರಮುಖವಾಗಿದೆ. ಅವರ ತತ್ವಗಳ ಅನುಸರಣೆಯಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ದೊರೆಯಲು ಸಾಧ್ಯವಾಗುತ್ತದೆ ಎಂದು ಜೈನ ತತ್ವ ಚಿಂತಕ ಜೀನೇಂದ್ರ ಸಾಗರಶೆಟ್ಟಿ ಅಭಿಮತಪಟ್ಟರು.

ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಜರುಗಿದ ‘ವರ್ಧಮಾನ ಮಹಾವೀರರ 2624ನೇ ಜಯಂತಿ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಉಪನ್ಯಾಸಕ, ಚಿಂತಕ ಎಚ್.ಬಿ ಪಾಟೀಲ ಮಾತನಾಡಿ, ಮಹಾವೀರ ಅವರು ಜೈನಧರ್ಮ ಪರಂಪರೆಯ ಕುರಿತು ಆಳವಾದ ಅಧ್ಯಯನ ಮಾಡಿದರು. ಅರಮನೆಯ ಸುಖ, ಭೋಗಗಳಲ್ಲಿ ತೊಡಗದೆ, ತ್ಯಾಗಿಗಳ, ವಿರಾಗಿಗಳ ಸಂಪರ್ಕ ಹೆಚ್ಚಾಗುತ್ತಾ ಸಾಗಿ, ವೈರಾಗ್ಯದತ್ತ ಮನಸ್ಸು ಒಲಿಯಿತು. ಸತತ 12 ವರ್ಷಗಳ ಕಾಲ ಘೋರ ತಪಸ್ಸು ಮಾಡಿ, ತಮ್ಮ ‘42ನೇ’ ವಯಸ್ಸಿನಲ್ಲಿ ‘ಕೈವಲ್ಯ ಜ್ಞಾನೋದಯ’ವನ್ನು ಪಡೆದರು. ‘ಕೈವಲ್ಯಜ್ಞಾನ’ ಎಂದರೆ, ಇಂದ್ರೀಯಗಳನ್ನು ನಿಗ್ರಹಿಸಿ ಸುಖ ಹಾಗೂ ದು:ಖಗಳ ಮೇಲೆ ನಿಯಂತ್ರಣ ಸಾಧಿಸಿಕೊಂಡವರು ಎಂದರ್ಥವಾಗಿದೆ. ಅಂದಿನಿಂದ ಇವರನ್ನು ‘ಮಹಾವೀರ’, ‘ಜಿನ’ ಎಂದು ಕರೆಯಲು ಆರಂಭವಾಯಿತು. ಆಗ ಅವರ ಹೆಸರು ‘ವರ್ಧಮಾನ ಮಹಾವೀರ’ ಆಯಿತು. ಅವರ ಅನುಯಾಯಿಗಳನ್ನು ‘ಜೈನ’ರೆಂದು ಕರೆಯಲಾಗುತ್ತದೆಯೆಂದು ವಿವರಿಸಿದರು.

ವರ್ಧಮಾನ ಮಹಾವೀರರು ಐದು ಪ್ರತಿಜ್ಞೆಗಳನ್ನು ಮತ್ತು ನಡವಳಿಕೆಯ ಮೂರು ನಿಯಮಗಳನ್ನು ಬೋಧಿಸಿದರು. ಇವುಗಳನ್ನು ತ್ರಿರತ್ನಗಳೆಂದು ಕರೆಯುತ್ತಾರೆ. ಪಂಚ ಪ್ರತಿಜ್ಞೆಗಳೆಂದರೆ, ಅಹಿಂಸೆ, ಸತ್ಯ, ಅಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯಗಳಾಗಿವೆ. ತ್ರಿರತ್ನಗಳೆಂದರೆ, ಸಮ್ಯಕಜ್ಞಾನ, ಸಮ್ಯಕ ದರ್ಶನ, ಸಮ್ಯಕಚಾರಿತ್ರಗಳಾಗಿವೆ. ವರ್ಧಮಾನ ಮಹಾವೀರ ಅವರು ಸೇರಿದಂತೆ, ಜೈನ ಧರ್ಮವು ಸದಾತ್ಯಾಗ, ಶಾಂತಿ, ಅಹಿಂಸೆಯ ತತ್ವಗಳನ್ನು ಸಾರ್ವಕಾಲಕ್ಕೂ ಬೋಧಿಸಿ ಅದರಂತೆಯೇ ನಡೆಯುತ್ತಿದೆ. ಪಂಪ, ರನ್ನ, ಪೊನ್ನ, ಜನ್ನರಂತಹ ಮೇರು ಕವಿಗಳು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಶ್ರೇಷ್ಟ ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಚಿಂತಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕರಾದ ಮಹಾದೇವಪ್ಪ ಎಚ್.ಬಿರಾದಾರ, ಗೋಪಾಲ ರಾಠೋಡ, ಪ್ರಮುಖರಾದ ದರ್ಶನ, ಮೌಲಾಲಿ, ಮೋದಿನ್ ಪಟೇಲ್, ಅಬ್ರಾರ್, ಪ್ರವೀಣ, ಶ್ರೀಕಾಂತ, ಗಂಗಾಧರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *