ಕಲಬುರಗಿ: ಸಂಗೀತ ಕ್ಷೇತ್ರದ ಬೆಳವಣಿಗೆಗೆ ತಮ್ಮ ಜೀವನದುದ್ದಕ್ಕೂ ಸೇವೆ ಸಲ್ಲಿಸಿ ನಾಡಿನ ಕೀರ್ತಿ ದೇಶದಾದ್ಯಂತ ಪಸರಿಸುವಂತೆ ಮಾಡಿದ ಸಂಗೀತ ದಿಗ್ಗಜೆ ಗಂಗೂಬಾಯಿ ಹಾನಗಲ್ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಸಂಗೀತ ಕಲಾವಿದ ಹಣಮಂತರಾಯ ಮಂಗಾಣೆ ಹೇಳಿದರು.
ನಗರದ ಆಳಂದ ಚೆಕ್‌ಪೋಸ್ಟ್ ಸಮೀಪದ ಗಾನ ಗಂಧರ್ವ ಸಂಗೀತ ಪಾಠಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಸಂಜೆ ಜರುಗಿದ ಐತಿಹಾಸಿಕ 4,900ನೇ ಕಾರ್ಯಕ್ರಮವಾದ ‘ಗಂಗೂಬಾಯಿ ಹಾನಗಲ್‌ರ 112ನೇ ಜನ್ಮದಿನಾಚರಣೆ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ವ್ಯಕ್ತಿಯಲ್ಲಿ ದೈಹಿಕ ಬದಲಾವಣೆಯೊಂದಿಗೆ ಮಾನಸಿಕ ಶಾಂತಿ ನೀಡುವ ಶಕ್ತಿ ಸಂಗೀತಕ್ಕಿದೆ. ಇಂದಿನ ಒತ್ತಡದ ಬದುಕಿನ ತೊಂದರೆಗೆ ಸಂಗೀತ ಆಲಿಸುವುದು ಅಗತ್ಯವಾಗಿದೆ ಎಂದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ ಮಾತನಾಡಿ, ನನಗೆ ಸಂಗೀತವೇ ದೇವರು. ಆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂದು ನಿರಂತರವಾಗಿ ಸಂಗೀತ ಅಭ್ಯಾಸ, ಸೇವೆಯನ್ನು ಮಾಡಿದ್ದೆನೆ ಎಂಬ ಹಾನಗಲ್‌ರ ಮಾತು ಸಂಗೀತದ ಬಗ್ಗೆ ಅವರಿಗಿರುವ ಅಪಾರವಾದ ಭಕ್ತಿ, ಶೃದ್ಧೆ ತೋರಿಸುತ್ತದೆ. ಬೆಳಗಾಂವ ಕಾಂಗ್ರೆಸ್ ಅಧಿವೇಶನದಲ್ಲಿ ಬಾಲ್ಯದಲ್ಲಿರುವಾಗಲೇ ಅವರು ಸುಮಧುರವಾಗಿ ಹಾಡುವ ಮೂಲಕ ಗಾಂಧೀಜಿಯವರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಸದಸ್ಯರಾದ ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಅಂಬರೀಶ್ ಬಿರಾದಾರ, ಸಂಗೀತ ಶಿಕ್ಷಕಿ ಸ್ವಾತಿ ಎಸ್.ಕಾಂಬಳೆ, ಶ್ರೀ ಪಟ್ಟಣ, ಈಶ್ವರಿ ನರೋಣಾ, ಭಾಗ್ಯಲಕ್ಷು ಉಪ್ಪಾರ, ಪ್ರಕೃತಿ, ವಿಶಾಲಾಕ್ಷಿ ಸೇರಿದಂತೆ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.