ಕಲಬುರಗಿ: ದೇಶದಲ್ಲಿರುವ ಪ್ರತಿಯೊಬ್ಬರು ನಾವೆಲ್ಲರು ಭಾರತಾಂಬೆಯ ಮಕ್ಕಳು ಒಂದೆ ಎಂಬ ಸಾಮರಸ್ಯ ಭಾವದಿಂದ ಬದುಕುವುದು ಪ್ರಸ್ತುತ ದಿನಗಳಲ್ಲಿ ಅತ್ಯವಶ್ಯಕ ಎಂದು ಉಪನ್ಯಾಸಕ ಹಾಗೂ ಸಮಾಜ ಸೇವಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ಖಾದ್ರಿ ದರ್ಗಾದ ಹಜರತ್ ಸೈಯದ್ ಷಾ ಹುಸನೋದ್ದಿನ್ ಖಾದ್ರಿ ಉರಫತ್ ನೂರಾನಿ ಬಾಬಾರವರ 19ನೇ ಉರುಸ್, ಕೋಮು ಸಾಮರಸ್ಯ ಕಾರ್ಯಕ್ರಮ ಹಾಗೂ ವಿವಿಧ ಸಮುದಾಯ ಮುಖಂಡರಿಗೆ ಸೋಮವಾರ ರಾತ್ರಿ ಏರ್ಪಡಿಸಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಮಾನವರೆಲ್ಲರೂ ಒಂದೆಯಾಗಿದ್ದು, ಹುಟ್ಟಿದ ಧರ್ಮ, ಜಾತಿಗಳ ಆಧಾರದ ಮೇಲೆ ಮೇಲು-ಕೀಳು ಭಾವನೆ ಮನುಷ್ಯನ ವ್ಯಕ್ತಿತ್ವ ಕುಗ್ಗಿಸುತ್ತವೆ. ಇವೆಲ್ಲವನ್ನು ಮೀರಿ ಉನ್ನತವಾದ ವ್ಯಕ್ತಿತ್ವ ನಮ್ಮದಾಗಿಸಿಕೊಳ್ಳಬೇಕು. ಎಲ್ಲಾ ಮಹಾತ್ಮರು ಸಮಾಜಕ್ಕೆ ನೀಡಿದ ವಿಶ್ವಭ್ರಾತೃತ್ವ ಮೌಲ್ಯಗಳು ಒಂದೆಯಾಗಿದ್ದು, ಅವುಗಳನ್ನು ತಿಳಿದುಕೊಳ್ಳುವಲ್ಲಿ ಎಡವಿದ್ದರಿಂದ ಆಗಾಗ್ಗೆ ಕೋಮು ಗಲಭೆಗಳಾಗುತ್ತವೆ ಎಂದರು.
ದೇವನೊಬ್ಬ, ನಾಮ ಹಲವು. ಜಾತಿ, ಧರ್ಮಗಳ ಆಧಾರದ ಮೇಲೆ ಕಲಹ, ಜಗಳವಾಡಿದರೆ ಯಾವುದೆ ಪ್ರಯೋಜನೆಯಿಲ್ಲ. ಎಲ್ಲರೂ ಜೊತೆಗೂಡಿ ಸಾಗಬೇಕು. ಪ್ರತಿಯೊಬ್ಬರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಬೆಳೆಸಿಕೊಳ್ಳಬೇಕು. ಎಲ್ಲಾ ಧರ್ಮಗಳ ತಿರುಳು ಒಂದೆಯಾಗಿದ್ದು, ಅದನ್ನು ಅರಿಯದೆ ಕಚ್ಚಾಟದಲ್ಲಿ ತೊಡಗಿರುವುದು ವಿಷಾದನೀಯ ಸಂಗತಿ. ಉರುಸ್ ನಿಮಿತ್ಯ ಇಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಮುಖಂಡ ಶರಣಗೌಡ ಪಾಟೀಲ ಮಾತನಾಡಿ, ಖಾದ್ರಿ ದರ್ಗಾದ ಯಾವುದೆ ಕಾರ್ಯಕ್ರಮಗಳಿದ್ದರೆ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿಯವರು ಭಾಗವಹಿಸುತ್ತೆವೆ. ಅದೆರೀತಿ ದರ್ಗಾದ ಪೂಜ್ಯರು, ಮುಖಂಡರು ನಮ್ಮ ಕಾರ್ಯಕ್ರಮಗಳಿಗೆ ಆಗಮಿಸುತ್ತಾರೆ. ಹೀಗೆ ಎಲ್ಲರು ಭಾಗವಹಿಸುವುದರಿಂದ ಪರಸ್ಪರ ಸ್ನೇಹ, ಭ್ರಾತೃತ್ವಭಾವನೆ ಬೆಳೆಯಲು, ಸಹ ಜೀವನ ಸಾಗಿಸಲು ಪೂರಕವಾಗುತ್ತದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ಪೂಜ್ಯ ಸೈಯದ್ ಷಾ ಮುರ್ತುಜಾ ಖಾದ್ರಿ ಸಜ್ಜಾದ ನಸೀನ್, ಸೈಯದ್ ಷಾ ಹಸನ್ ಖಾದ್ರಿ ನಜೀಬ್ ಬಾಬಾ ವಹಿಸಿದ್ದರು.
ಪ್ರಮುಖರಾದ ಗೌಸಬಾಬಾ, ಚಂದ್ರಕಾಂತ ಬಿರಾದಾರ, ಪ್ರಭುಲಿಂಗ ಮುಲಗೆ, ಶಿವಯೋಗೆಪ್ಪಾ ಎಸ್. ಬಿರಾದಾರ, ನವಾಬಖಾನ್, ಬಸವರಾಜ ಬೆಣ್ಣೆಶಿರೂರ್ ನೀಲೂರ್, ಪರಮೇಶ್ವರ ಹಳೆಜವಳಾ, ಮಲ್ಲಿಕಾರ್ಜುನ ಬುಳ್ಳಾ, ಪ್ರಕಾಶ ಔರಾದಕರ್, ವೀರಸಂಗಪ್ಪ ವೇದಿಕೆ ಮೇಲಿದ್ದರು. ನಗರ ಸೇರಿದಂತೆ ಜಿಲ್ಲೆ, ರಾಜ್ಯ ಹಾಗೂ ವಿವಿಧ ರಾಜ್ಯಗಳ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು. ನಂತರ ರಾತ್ರಿ ಆಕರ್ಷವಾಗಿ ಕವ್ವಾಲಿ, ಸಂಗೀತ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಾನುವಾರ ರಾತ್ರಿ ಗಂಧೋತ್ಸವ ಜರುಗಿತು