ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಚ್ 7 ರಂದು ತಮ್ಮ ರಾಜಕೀಯ ಜೀವನದಲ್ಲಿ 16ನೇ ಬಾರಿ ರಾಜ್ಯ ಬಜೆಟ್ ಮಂಡನೆ ಮಾಡಿ ಇತಿಹಾಸ ಸೃಷ್ಟಿ ಮಾಡಲಿದ್ದಾರೆ.
ಈ ಬಾರಿಯ ಆಯವ್ಯಯದಲ್ಲಿ ಹಲವು ಯೋಜನೆಗಳು ಘೋಷಣೆಯಾಗುವ ನಿರೀಕ್ಷೆಯಲ್ಲಿ ರಾಜ್ಯದ ಜನತೆ ಇದ್ದಾರೆ. ಬಜೆಟ್‌ನಲ್ಲಿ ವಿಶೇಷ ಯೋಜನೆಗಳ ಜೊತೆಗೆ ಕೆಲವು ಜಿಲ್ಲೆಗಳ ರಚನೆ ಕುರಿತು ಶುಭಸುದ್ದಿ ಸಿಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಾಖಲೆಯ 16ನೇ ಬಜೆಟ್‌ನಲ್ಲಿ ಗ್ಯಾರಂಟಿಗಳ ಹೊರತಾಗಿ ಈ ಬಾರಿಯ ಬಜೆಟ್‌ನಲ್ಲಿ ಹೊಸದೆನು ಇರಲಿದೆ ಎಂಬುದು ಕೂಡ ಚರ್ಚೆಯಾಗುತ್ತಿದೆ. ರೈತರಿಗೆ, ಮಹಿಳೆಯರಿಗೆ ಹೊಸ ಯೋಜನೆಗಳು ಜಾರಿಯಾಗುವ ನಿರೀಕ್ಷೆ ಇದೆ, ಬಹುದಿನಗಳಿಂದ ಹೊಸ ಜಿಲ್ಲೆಗಳ ಬೇಡಿಕೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಗಳನ್ನು ವಿಭಜಿಸಿ ಹೊಸ ಜಿಲ್ಲೆಗಳು ಬಜೆಟ್‌ನಲ್ಲಿ ಘೋಷಿಸುತ್ತಾರಾ ಎಂಬ ಪ್ರಶ್ನೆ ವಿವಿಧ ಜಿಲ್ಲಾ ರಚನಾ ಹೋರಾಟಗಾರರಿಗೆ ಕಾಡುತ್ತಿದೆ.
ಈಗಾಗಲೇ ಬಹುದಿನಗಳಿಂದ ಉತ್ತರ ಕರ್ನಾಟಕದಲ್ಲಿ ಜಿಲ್ಲೆಗಳ ವಿಭಜನೆಯ ಕೂಗು ಹೆಚ್ಚಾಗಿದೆ. ರಾಜ್ಯದ ಅತಿದೊಡ್ಡ ಜಿಲ್ಲೆ ಬೆಳಗಾವಿ ಜಿಲ್ಲೆಯ ವಿಭಜನೆಗೆ ಕುರಿತು ಸ್ಥಳೀಯ ಶಾಸಕರು ಹಾಗೂ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆಗೆ ಈ ಹಿಂದೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ, ಈ ಬಾರಿಯ ಬಜೆಟ್’ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡುತ್ತಾರಾ ಎಂಬ ಚರ್ಚೆ ಜೋರಾಗಿದೆ. ಪ್ರಸ್ತುತ 31 ಜಿಲ್ಲೆಗಳ ಪೈಕಿ ಉತ್ತರ ಕರ್ನಾಟಕದ ಜಿಲ್ಲೆಗಳ ವಿಭಜನೆ ಕೂಗು ಹೆಚ್ಚಾಗಿದೆ, ಅತಿ ದೊಡ್ಡ ಜಿಲ್ಲೆ ಬೆಳಗಾವಿಯನ್ನು ವಿಭಜಿಸಿ ಬೈಲಹೊಂಗಲ ಅಥವಾ ಗೋಕಾಕ್, ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆಗಳ ರಚನೆಗೆ ಬೇಡಿಕೆಯಿದೆ.
ತುಮಕೂರಿನ ಮಧುಗಿರಿ, ತಿಪಟೂರು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಜಿಲ್ಲೆಗಳಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ, ಮೈಸೂರಿನ ಹುಣಸೂರು ಜಿಲ್ಲೆಗಳಾಗಬೇಕು ಎಂಬುದು ಅಲ್ಲಿನ ಜನರು ಆಗ್ರಹಿಸಿದ್ದಾರೆ. ಈ ನಡುವೆ ಅನೇಕ ಕಡೆಗಳಲ್ಲಿ ಜಿಲ್ಲೆಗಳ ರಚನೆಯಾಗಬೇಕು ಎಂಬ ಹೋರಾಟಗಳು ನಡೆಯುತ್ತಲೆ ಇದೆ. ಆದರೆ ರಾಜ್ಯ ಸರಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಸರಕಾರವು ಹೊಸ ಜಿಲ್ಲೆಗಳ ರಚನೆಗೆ ಮುಂದಾಗುವದು ಅನುಮಾನ ಎಂದು ಹೇಳಲಾಗುತ್ತಿದೆ. ಜಿಲ್ಲಾ ಕೇಂದ್ರಗಳು ತಾಲೂಕು ಕೇಂದ್ರಗಳಿಂದ ದೂರ ಎಂಬ ಕಾರಣಕ್ಕೆ ಬಹುತೇಕ ಹೊಸ ಜಿಲ್ಲೆಗಳ ಬೇಡಿಕೆ ಹೆಚ್ಚಾಗಿದೆ. ಸಣ್ಣ ಜಿಲ್ಲೆಗಳ ರಚನೆಯಾದರೆ ಸರಕಾರದಿಂದ ಹೆಚ್ಚು ಅನುದಾನ ದೊರೆಯುತ್ತದೆ. ಅಭಿವೃದ್ದಿ ಕಾಮಗಾರಿಗಳು ವೇಗ ಪಡೆಯುತ್ತವೆ. ಸರಕಾರಿ ಕಚೇರಿಗಳು ಜನ ಸಾಮಾನ್ಯರಿಗೆ ಹತ್ತಿರವಾಗಿ, ನಾನಾ ಸೌಲಭ್ಯ ದೊರಕುತ್ತವೆ ಎಂದು ಹೊಸ ಜಿಲ್ಲೆಗಳಿಗೆ ಜನರು ಬೇಡಿಕೆಯಿಟ್ಟಿದ್ದಾರೆ.
ಯಾವ ಜಿಲ್ಲೆಗಳ ರಚನೆಗೆ ಹೆಚ್ಚಿದೆ ಕೂಗು ?
ಕಲಬುರಗಿ – ಸೇಡಂ, ಶಹಾಪುರ
ವಿಜಯಪುರ – ಇಂಡಿ
ರಾಯಚೂರು – ಸಿಂಧನೂರು
ಬಾಗಲಕೋಟೆ – ಜಮಖಂಡಿ
ಬೆಳಗಾವಿ – ಗೋಕಾಕ್, ಬೈಲಹೊಂಗಲ, ಚಿಕ್ಕೋಡಿ
ಕೊಪ್ಪಳ – ಗಂಗಾವತಿ
ಬೈಲಹೊಂಗಲ, ಚಿಕ್ಕೋಡಿ
ಉತ್ತರ ಕನ್ನಡ – ಶಿರಸಿ
ಶಿವಮೊಗ್ಗ – ಶಿಕಾರಿಪುರ, ಸಾಗರ
ತುಮಕೂರು – ತಿಪಟೂರು, ಮಧುಗಿರಿ
ದಕ್ಷಿಣ ಕನ್ನಡ – ಪುತ್ತೂರು
ಮೈಸೂರು – ಹುಣಸೂರು
ರಾಜ್ಯದ ವಿವಿಧ ಭಾಗಗಳಿಂದ ಹೊಸ ಜಿಲ್ಲೆಗಳ ರಚನೆಗೆ ಎಲ್ಲಾ ಕಡೆಯಿಂದ ಬೇಡಿಕೆ ಕೇಳಿ ಬರುತ್ತಿದೆ. ಆದರೆ ಸರಕಾರ ಮಾತ್ರ ಜಿಲ್ಲೆಗಳ ರಚನೆಗೆ ಮುಂದಾಗುತ್ತಿಲ್ಲ. ಹೊಸ ಜಿಲ್ಲೆ ರಚಿಸಿದರೆ ಆ ಜಿಲ್ಲೆಗೆ ಪ್ರತ್ಯೇಕ ಅನುದಾನ ನೀಡಬೇಕು, ಹೊಸ ಕಟ್ಟಡ, ಸಿಬ್ಬಂದಿ ಸೇರಿ ಎಲ್ಲವನ್ನೂ ಕೊಡಬೇಕಾಗುತ್ತದೆ. ಇದಕ್ಕೆ ಭಾರಿ ಪ್ರಮಾಣದ ಹಣವನ್ನು ಮೀಸಲಿಡಬೇಕಾಗುತ್ತದೆ. ಹೊಸ ಜಿಲ್ಲೆಗಳನ್ನು ರಚಿಸಿದರೆ ಬೇರೆ ಕಡೆಯಿಂದಲೂ ಹೊಸ ಜಿಲ್ಲೆಗೆ ಬೇಡಿಕೆ ಬರುತ್ತದೆ ಎಂಬ ಕಾರಣಕ್ಕೆ ಸರಕಾರ ಹೊಸ ಜಿಲ್ಲೆಗಳ ರಚನೆಗೆ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.