ಕಲಬುರಗಿ: ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಲು ಅನೇಕ ಸಾಹಿತಿಗಳು ಶ್ರಮಿಸಿದ್ದಾರೆ. ಉತ್ತಮ ಲೇಖಕ, ಶಿಕ್ಷಕ, ಸಾಹಿತಿಯಾಗಿ ಸಮಾಜಮುಖಿ ಚಿಂತನೆಗಳುಳ್ಳ ಸಾಹಿತ್ಯ ಕೃಷಿ ಮಾಡುವ ಮೂಲಕ ‘ನಿತ್ಯೋತ್ಸವ ಕವಿ’ ಎಂದು ಪ್ರಸಿದ್ಧಿ ಪಡೆದಿರುವ ಡಾ.ಕೆ.ಎಸ್ ನಿಸಾರ ಅಹಮ್ಮದ್ ಅವರು ಬಹುಮುಖ ಪ್ರತಿಭೆಯ ಮೇರು ಲೇಖಕರು ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದ ಸ್ವಾತಿ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ಡಾ.ಕೆ.ಎಸ್ ನಿಸಾರ ಅಹಮ್ಮದ್‌ರ 89ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾತನಾಡಿದ ಅವರು, ಡಾ. ಅಹಮ್ಮದ್‌ರು ‘ನಿತ್ಯೋತ್ಸವ’, ‘ಮನಸ್ಸು ಗಾಂಧಿ ಬಜಾರು’ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರಿಗೆ ಮಾಸ್ತಿ, ರಾಜ್ಯೋತ್ಸವ, ನಾಡೋಜ ಪ್ರಶಸ್ತಿ ಸೇರಿ ಮುಂತಾದ ಪ್ರಶಸ್ತಿ ದೊರೆತಿವೆ. ನಾವು ಕಾಣುವ ಕನ್ನಡದ ಶ್ರೀಮಂತಿಕೆ ಹಿಂದೆ ಅನೇಕ ಸಾಹಿತಿಗಳ ಪರಿಶ್ರಮವಿದೆ. ಕನ್ನಡದಲ್ಲಿ ಮಾತನಾಡುವ, ಓದುವ, ಬರೆಯುವ ‘ಕನ್ನಡತನ ಸಂಸ್ಕೃತಿ’ ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ರೊಹಿತ್ ವೈರಪುಲ್, ಕಾಶಮ್ಮ, ಪ್ರೀತಿ, ಪ್ರಿಯಾಂಕಾ, ವರ್ಷಾರಾಣಿ, ಖಮರುನ್ನಿಸ್, ಭಾಗ್ಯಶ್ರೀ, ಮಲ್ಲಮ್ಮ ಮತ್ತು ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.