ಕಲಬುರಗಿ: ತಂಬಾಕು, ಮದ್ಯಪಾನ, ರಾಸಾಯನಿಕಯುಕ್ತ ಆಹಾರ ಸೇವನೆ ಮಾಡಿರುವುದು, ಸಮತೋಲಿತ ಆಹಾರ ಸೇವಿಸುವುದು, ತೂಕ ನಿರ್ವಹಣೆ ಮಾಡುವುದು ಸೇರಿದಂತೆ ಮುಂತಾದ ಆರೋಗ್ಯಕರ ಜೀವನ ಶೈಲಿಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕ್ಯಾನ್ಸರ್ ರೋಗ ಬರದಂತೆ ತಡೆಯಬಹುದಾಗಿದೆ ಎಂದು ಖ್ಯಾತ ಕುಟುಂಬ ವೈದ್ಯ ಡಾ.ರಾಜಶೇಖರ ಪಾಟೀಲ ಹೇಳಿದರು.
ಅಫಜಲಪುರ ತಾಲೂಕಿನ ಟಾಕಳಿಯಲ್ಲಿ ಕಲಬುರಗಿಯ ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆ ಮತ್ತು ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ ‘ವಿಶ್ವ ಕ್ಯಾನ್ಸರ್ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ವಯಸ್ಸು, ಲಿಂಗ, ಅನುವಂಶೀಯತೆ, ಪರಿಸರದ ಅಂಶಗಳು, ರಾಸಾಯನಿಕ ಮತ್ತು ವಿಷಪೂರಿತ ಆಹಾರ ಸೇವನೆ, ತಂಬಾಕು, ಆಲ್ಕೋಹಾಲ್, ಎಚ್’ಸಿಬಿ, ಎಚ್’ಬಿವಿ, ಇಬಿವಿ ಬ್ಯಾಕ್ಟಿರೀಯಾ, ಕೆಲವು ಔಷಧಗಳ ನಿರಂತರ ಸೇವನೆಯಂತಹ ಮುಂತಾದ ಕಾರಣಗಳಿಂದ ಕ್ಯಾನ್ಸರ್ ರೋಗ ಬರುತ್ತದೆ. ಎಂದರು.
ಆಧುನಿಕ ಒತ್ತಡದ ಬದುಕಿನಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ದೇಹದಲ್ಲಿ ಜೀವಕೋಶಗಳ ಅಸಾಮಾನ್ಯ ಬೆಳವಣಿಗೆಯಾಗುತ್ತವೆ. ಕ್ಯಾನ್ಸರ್‌ನಲ್ಲಿ 2೦೦ ಪ್ರಕಾರಗಳಿವೆ. ಹಳದಿ ಬಣ್ಣಕ್ಕೆ ತಿರುಗುವುದು, ತೂಕದಲ್ಲಿ ಹೆಚ್ಚಳ ಅಥವಾ ನಷ್ಟ, ಉಸಿರಾಟದ ತೊಂದರೆ, ನಿರಂತರವಾದ ಕೀಲುನೋವು, ರಕ್ತಸ್ರಾವವಾಗುವುದು ಲಕ್ಷಣಗಳಾಗಿವೆ. ಗರ‍್ತಿಸಿ, ಚಿಕಿತ್ಸೆ ಪಡೆದರೆ ಗುಣಮುಖರಾಗಲು ಸಾಧ್ಯವಿದೆ. ಕ್ಯಾನ್ಸರ್ ರೋಗಿಗಳ ಬಗ್ಗೆ ಕೀಳರಿಮೆ ಬೇಡ. ಭಯ ಬೇಡ, ಮುಂಜಾಗ್ರತೆ ವಹಿಸಿ ಎಂದು ತಿಳಿಸಿದರು.
ಕಾರ್ಯಕ್ರಮ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ ಪಾಟೀಲ, ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ ಸೇರಿದಂತೆ ಅನೇಕರು ಇದ್ದರು.