ಬಳ್ಳಾರಿ: ಬಾಡಿಗೆ ವಾಹನಗಳ ಟ್ರೆಂಡ್ ಸದ್ಯ ಜೋರಾಗಿದೆ. ಅದರಲ್ಲೂ ಸೆಲ್ಫ್ ಡ್ರೈವಿಂಗ್ಗೆಂದು ವಾಹನ ಪಡೆಯುವವರೆ ಹೆಚ್ಚು, ಹೀಗಾಗಿ ಕೆಲ ವಾಹನಗಳ ಮಾಲಿಕರು ಕಂಡ ಕಂಡವರಿಗೆ ವಾಹನಗಳನ್ನು ಬಾಡಿಗೆಗೆ ಕೊಡುವುದು ಉಂಟು. ಅಂತಹ ಮಾಲಿಕರಿಗೆ ಬಳ್ಳಾರಿಯಲ್ಲೊಬ್ಬ ವ್ಯಕ್ತಿ ಭರ್ಜರಿ ಶಾಕ್ ಕೊಟ್ಟಿದ್ದಾನೆ. ಯಾಮಾರಿ ಯಾರ್ಯಾರಿಗೋ ವಾಹನಗಳನ್ನು ಬಾಡಿಗೆ ನೀಡಿದರೆ, ಅವು ಇನ್ಯಾರ ಬಳಿ ಗಿರವಿ ಇರುತ್ತವೆ ಎಂಬುದು ಪ್ರೂವ್ ಮಾಡಿ ತೋರಿಸಿದ್ದಾನೆ.
ಕಾರು ಪಡೆದಿದ್ದು ಬಾಡಿಗೆಗೆ, ಇಟ್ಟಿದ್ದು ಗಿರವಿಗೆ
ರಾಯಚೂರು ಜಿಲ್ಲೆಯ ಸಿಂಧನೂರಿನ M.D ಜಹೀದ್ ಭಾಷಾ ಅಲಿಯಾಸ್ ಸೋನು ಎಂಬಾತ ಬಳ್ಳಾರಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಕಾರುಗಳನ್ನು ಬಾಡಿಗೆಗೆ ಪಡೆದಿದ್ದ. ಕಾರುಗಳ ಮಾಲಿಕರಿಗೆ ಪ್ರತಿ ತಿಂಗಳು 50-60 ಸಾವಿರ ರೂ.ಗಳ ವರೆಗೆ ಬಾಡಿಗೆ ನೀಡುವ ಭರವಸೆ ನೀಡಿದ್ದ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ತಾನು ಹೇಳಿದಂತೆ ಸೋನು ಬಾಡಿಗೆಯನ್ನ ಕಾರುಗಳ ಮಾಲೀಕರಿಗೆ ಸರಿಯಾಗಿ ನೀಡುತ್ತಿದ್ದನು. ಆ ಬಳಿಕ ತನ್ನ ನವರಂಗಿ ಆಟ ತೋರಿಸಲು ಶುರುಮಾಡಿದ, ಬಾಡಿಗೆ ಕೇಳಿದರೆ ಒಂದೊಂದು ಕತೆ ಹೇಳುತ್ತಿದ್ದ. ಇದು ಹೀಗೆ ಮುಂದುವರಿದು ಮೂರು ತಿಂಗಳವರೆಗಿನ ಬಾಡಿಗೆ ಹಣ ಬಾಕಿಯಾದಾಗ ಕಾರುಗಳ ಮಾಲೀಕರು ಎಚ್ಚೆತ್ತುಕೊಂಡಿದ್ದಾರೆ. ಕಾರಿನ ಜಿಪಿಎಸ್ ಟ್ರ್ಯಾಕ್ ಮಾಡಿದಾಗ ಅವುಗಳನ್ನು ಅಪರಿಚಿತರ ಬಳಿ ಸೋನು ಗಿರವಿ ಇಟ್ಟಿರುದು ಬೆಳಕಿಗೆ ಬಂದಿದೆ.
ವಂಚನೆ ಹೇಗೆ ಮಾಡುತ್ತಿದ್ದ ?
ಬಳ್ಳಾರಿಯ ತನ್ನ ಸ್ನೇಹಿತರ ಮೂಲಕ ಕಾರುಗಳ ಮಾಹಿತಿಯನ್ನು ಸೋನು ಪಡೆದುಕೊಳ್ಳುತ್ತಿದ್ದ. ತನ್ನ ಚಾಣಾಕ್ಷ ಬುದ್ಧಿ ಉಪಯೋಗಿಸಿ, ಮಾಲಿಕರ ಜೊತೆಗೆ ನೇರ ಸಂಪರ್ಕವಿಲ್ಲದೆ ವ್ಯವಹಾರ ಮಾಡುತ್ತಾ ಬಂದಿದ್ದ. ಬಾಡಿಗೆ ಪಡೆದಿದ್ದ ಕಾರುಗಳಿಗೆ ಒಪ್ಪಂದವನ್ನು ಈತ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಆರಂಭದಲ್ಲಿ ಈತ ಸರಿಯಾಗಿ ಬಾಡಿಗೆ ಹಣ ನೀಡುತ್ತಿದ್ದ, ಹೀಗಾಗಿ ಕಾರುಗಳ ಮಾಲಿಕರು ಈತನನ್ನು ನಂಬಿದ್ದರು.
ತಿಂಗಳು ತಿಂಗಳು ಬಾಡಿಗೆ ಹಣ ಬರುತ್ತೆ ಎಂದು ಈ ಖತರ್ನಾಕ್ ಅಸಾಮಿ ಸೋನುಗೆ ಕಾರುಗಳನ್ನು ಬಾಡಿಗೆಗೆ ಕೊಟ್ಟಿದ್ದ ನೂರಾರು ಜನ ಮಾಲಿಕರೀಗ ಕಂಗಾಲಾಗಿದ್ದಾರೆ. ಸದ್ಯ ಬಾಡಿಗೆಯೂ ಇಲ್ಲ, ಕಾರುಗಳು ಇಲ್ಲದ ಸ್ಥಿಯಲ್ಲಿದ್ದಾರೆ. ವಂಚನೆಗೆ ಒಳಗಾದವರು ಸದ್ಯ ಬಳ್ಳಾರಿ ಬ್ರೂಸ್ ಪೇಟೆ ಪೊಲೀಸರ ಮೊರೆ ಹೋಗಿದ್ದು, ನಮಗೆ ನ್ಯಾಯ ಕೊಡಿಸಿ. ನಮ್ಮ ಕಾರುಗಳನ್ನು ಮರಳಿ ನಮಗೆ ಕೊಡಿಸಿ ಎಂದು ಅಂಗಲಾಚಿದ್ದಾರೆ.