ಚಿತ್ತಾಪುರ: ಭಾಗೋಡಿ ಗ್ರಾಮದ ಹತ್ತಿರ
ಹರಿಯುವ ಕಾಗಿಣಾ ನದಿಗೆ ಏತ ನೀರಾವರಿ
ಯೋಜನೆ ಮೂಲಕ ರೈತರಿಗೆ ನೀರಾವರಿ ಸೌಲಭ್ಯ
ಒದಗಿಸಬೇಕು ಎಂದು ಗ್ರಾಮದ ಮುಖಂಡ ದೇವಿಂದ್ರ
ಎಂ. ಅರಣಕಲ್ ಗ್ರಾಮೀಣಾಭಿವೃದ್ಧಿ ಮತ್ತು
ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ
ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ
ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ಭಾಗೋಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಕಾಗಿಣಾ ನದಿಗೆ ದೂರದೃಷ್ಟಿಯ ಫಲವಾಗಿ ನದಿಗೆ
ಅಡ್ಡಲಾಗಿ ಬಾಂದಾರ ಸೇತುವೆ ನಿರ್ಮಿಸಲಾಗಿದೆ.
ಸದಾ ನದಿಯಲ್ಲಿ ನೀರು ಸಂಗ್ರಹವಿರುತ್ತದೆ. ಕಾಗಿಣಾ
ನದಿಯ ಉತ್ತರ ಭಾಗದ ಭೂ ಪ್ರದೇಶದಲ್ಲಿನ ರೈತರಿಗೆ
ಬೆಣ್ಣೆತೊರಾ ಯೋಜನೆಯ ಸೌಲಭ್ಯ
ದೊರಕಿಸಿಕೊಡಲು ಕಾಲುವೆಗಳ ನಿರ್ಮಾಣ
ಮಾಡಲಾಗಿದೆ. ಆದರೆ ನದಿಯ ದಕ್ಷಿಣ ಭಾಗದಲ್ಲಿ
ರೈತರಿಗೆ ಯಾವುದೆ ರೀತಿಯ ನೀರಾವರಿ
ಯೋಜನೆಯ ಸೌಲಭ್ಯ ಒದಗಿಸಿಲ್ಲ. ಹೀಗಾಗಿ
ಭಾಗೋಡಿ, ಕದರಗಿ, ಮುಡಬೂಳ ಗ್ರಾಮಗಳ ರೈತರಿಗೆ
ನೀರಾವರಿ ಸೌಲಭ್ಯ ಕಲ್ಪಿಸಲು ಹೊಸದಾಗಿ ಏತ
ನೀರಾವರಿ ಯೋಜನೆ ಸರ್ಕಾರದಿಂದ ಮಂಜೂರಾತಿ
ಪಡೆದುಕೊಂಡು ರೈತರ ಬಾಳಿಗೆ ನೆರವಾಗುವ ರೈತಪರ
ಯೋಜನೆ ಅನುಷ್ಠಾನಕ್ಕೆ ತಾವು ಮುಂದಾಗಬೇಕು
ಎಂದು ಮನವಿ ಮಾಡಿದ್ದಾರೆ.
ಭಾಗೋಡಿ ಗ್ರಾಮದ ಹತ್ತಿರ ಕಾಗಿಣಾ ನದಿಗೆ ಏತ
ನೀರಾವರಿ ಯೋಜನೆ ಕೈಗೆತ್ತಿಕೊಂಡರೆ ಭಾಗೋಡಿ
ಗ್ರಾಮದ ಒಟ್ಟು 481 ಸರ್ವೆ ನಂಬರ್ ವಿಸ್ತೀರ್ಣ
6579.31 ಎಕರೆ ಜಮೀನು, ಮುಡಬೂಳ ಗ್ರಾಮದ
ಒಟ್ಟು ಸರ್ವೆ ನಂಬರ್ 190, ಒಟ್ಟು ವಿಸ್ತೀರ್ಣ
2529.04 ಎಕರೆ ಜಮೀನು, ಕದ್ದರಗಿ ಗ್ರಾಮದ ಒಟ್ಟು
ಸರ್ವೆ ನಂಬರ್ 172, ವಿಸ್ತೀರ್ಣ 2154.16 ಎಕರೆ
ಜಮೀನಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ.
ಸದರಿ ವಿಷಯವನ್ನು ತಾವು ರೈತರ ಏಳಿಗೆಗೆ ಏತ
ನೀರಾವರಿ ಯೋಜನೆ ಸರ್ಕಾರದಿಂದ ಮಂಜುರಾತಿ
ಪಡೆದುಕೊಂಡು ರೈತರಿಗೆ ಅನುಕೂಲ
ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡ ಮಲ್ಲಿಕಾರ್ಜುನ ದೊಡ್ಡಮನಿ
ಭಾಗೋಡಿ, ಬಾಬುರಾವ್ ಕುದರಿ, ರಾಜೇಂದ್ರ
ಪೊತನಕರ್, ಮಲ್ಲಿಕಾರ್ಜುನ ಬೆಣ್ಣೂರ ಇದ್ದರು.