ಚಿತ್ತಾಪುರ: ದೇವಿ ಪುರಾಣ ಆಲಿಸುವುದರಿಂದ ನಮ್ಮ ಜೀವನದ ಚಿಂತೆ ದೂರವಾಗಿ ಶಾಂತಿ ಮತ್ತು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದು ಗುಂಡೆಪಲ್ಲಿಯ ಸೋಮೇಶ್ವರ ಮಠದ ಸಿದ್ದಸೋಮೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ದಿಗ್ಗಾಂವ ಪಂಚಗೃಹ ಹಿರೇಮಠದಲ್ಲಿ ಹಮ್ಮಿಕೊಳ್ಳಲಾಗಿರುವ ದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜಗತ್ತಿನ ಇತಿಹಾಸವನ್ನು ಹೇಳಿಕೊಡುವ ದೇವಿ ಪುರಾಣ ತುಂಬಾ ವಿಶೇಷವಾಗಿದೆ. ಬೇರೆ ಎಲ್ಲಾ ಪುರಾಣಕ್ಕು ದೇವಿ ಪುರಾಣಕ್ಕು ತುಂಬಾ ವ್ಯತ್ಯಾಸವಿದೆ, ದೇವಿ ಪುರಾಣ ಕೇಳುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತದೆ ಇಷ್ಟೊಂದು ವಿಶೇಷವಾಗಿದೆ ದೇವಿ ಪುರಾಣ. ದೇವಿ ದುಷ್ಟರನ್ನು ಸಂಹಾರ ಮಾಡಿ, ಶಿಷ್ಟರನ್ನು ರಕ್ಷಣೆ ಮಾಡುವ ಮಹಾನ್ ಶಕ್ತಿ ದೇವತೆಯಾಗಿದ್ದಾಳೆ ಎಂದರು.
84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಎಂಬ ಜೀವರಾಶಿ ಬಹಳ ಶ್ರೇಷ್ಠವಾದದ್ದು. ಯಾಕೆಂದರೆ ಮನುಷ್ಯನಿಗೆ ಜ್ಞಾನ ಕೊಟ್ಟಿದ್ದಾರೆ ಜೊತೆಗೆ ಇನ್ನೂ ಮೂರು ಕೊಟ್ಟಿದ್ದಾರೆ. ನಗುವದು, ಮಾತಾಡೊದು ಮತ್ತು ಎರಡು ಕೈಗಳು ಈ ಎಲ್ಲಾ ಕೊಟ್ಟಿರುವುದು ಮನುಷ್ಯನಿಗೆ ಮಾತ್ರ ಎಂದರು.
ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯರು ಮಾತನಾಡಿ, ಕಲಿಯುಗದಲ್ಲಿ ದೇವರ ನಾಮ ಸ್ಮರಣೆಗೆ ಮಹತ್ವ ಕಲ್ಪಿಸಲಾಗಿದೆ. ಪರಮಾತ್ಮನ ನೇರ ಸಾಕ್ಷಾತ್ಕಾರ ಇಲ್ಲ. ಪುರಾಣ ಪ್ರವಚನದಿಂದ ದೇವರ ಕೃಪೆ ಪಾತ್ರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಪೂಜೆ, ದಾನ, ಧರ್ಮ, ಒಳ್ಳೆಯ ಕಾರ್ಯ, ಸನ್ನಡತೆಯಿಂದ ಪುಣ್ಯ ಪ್ರಾಪ್ತಿಯಾಗುತ್ತಿರುತ್ತದೆ. ಇದು ಮುಖದಲ್ಲಿ ಚೇತನ ತರುತ್ತದೆ. ಆದರೆ ನೀವು ಇನ್ನೊಬ್ಬರನ್ನು ನಿಂದಿಸಿದರೆ, ಮೋಸ ಮಾಡಿದರೆ, ಕೆಟ್ಟ ಹಾದಿಯಲ್ಲಿ ನಡೆದರೆ ಪುಣ್ಯವೆಲ್ಲ ಕರಗಿ ನರಕಕ್ಕೆ ಹೋಗಬೇಕಾಗುತ್ತದೆ ಎಂದರು.
ಪುರಾಣ – ಪ್ರವಚನಕಾರ ಜಗದೀಶ ಶಾಸ್ತ್ರಿ ಸನ್ನತ್ತಿ, ಸಂಗೀತ ಸಂಗಯ್ಯ ಸ್ವಾಮಿ ಸ್ಥಾವರಮಠ, ಕೀಬೋರ್ಡ್ ಮಲ್ಲಿಕಾರ್ಜುನ ಹಲಕರ್ಟಿ, ತಬಲಾ ಶರಣಯ್ಯ ಸ್ವಾಮಿ ಮಠಪತಿ, ಗವಾಯಿ ಗುರುರಾಜ ಪಾಟೀಲ, ಮಹಾದೇವಪ್ಪ ಹೂಗಾರ, ಸೇವೆ ಸಲ್ಲಿಸಿದರು.
ಶಿವನಾಗಪ್ಪ ಮುತ್ತಲಗಡ್ಡಿ, ಗಂಗಾಧರ ಸ್ವಾಮಿ ಹಿರೇಮಠ, ತಿಪ್ಪಣ್ಣ ಸಂಗಾವಿ, ಬಸವಂತರಾವ ಮಾಲಿಪಾಟೀಲ, ಮಲ್ಲಿನಾಥ ಭಾಗೋಡಿ, ಸಿದ್ದಣ್ಣಗೌಡ ಪೊ ಪಾಟೀಲ, ಅಶೋಕ ಗುತ್ತೆದಾರರ, ಮಲಶೆಟ್ಟೆಪ್ಪ ಸಂಗಾವಿ, ಜಗನ್ನಾಥ ಸೀದಾ, ಮಲ್ಲಿಕಾರ್ಜುನ ಭಾರಿಗಿಡ, ಭೀಮರಾಯ ಸುಲ್ತಾನಪುರ ಸೇರಿದಂತೆ ಅನೇಕರು ಇದ್ದರು.
ಕಾರ್ಯಕ್ರಮವನ್ನು ಶರಣು ಉಡಗಿ ದಿಗ್ಗಾಂವ ನಿರೂಪಿಸಿದರು, ನಾಗಭೂಷಣ ಸ್ವಾಮಿ ಹಿರೇಮಠ ದಿಗ್ಗಾಂವ ಸ್ವಾಗತಿಸಿದರು.