ಕವಲಗಾ(ಬಿ) ಪಿಡಿಓ ಪ್ರೀತಿರಾಜ್ ಅಮಾನತು

ಜಿಲ್ಲೆ

ಕಲಬುರಗಿ: ತಾಲೂಕಿನ ಕವಲಗಾ(ಬಿ) ಗ್ರಾಮದ ಪಂಪ್ ಆಪರೇಟರ್ ಗುರುಸಿದ್ದಯ್ಯ ಸ್ಥಾವರಮಠ ಎಂಬುವವರ ವೇತನ ಬಿಡುಗಡೆ ಮಾಡಲು ಹಾಗೂ ಸೇವೆಗೆ ಮರು ನೇಮಕ ಮಾಡಿಕೊಳ್ಳಲು 17 ಸಾವಿರ ಲಂಚ ಪಡೆದ ಆರೋಪದ ಮೇರೆಗೆ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಪಿಡಿಓ ಪ್ರೀತಿರಾಜ್ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಲೋಕಾಯುಕ್ತ ದಾಳಿಯಾಗಿರುವುದರಿಂದ ಕೆಸಿಎಸ್‌ಆ‌ರ್ ನಿಯಮಾವಳಿಗಳ ಅನ್ವಯ ಶಿಸ್ತು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಸಂಸ್ಥೆಯ ಪೊಲೀಸ್ ಇನ್‌ಸ್ಪೆಕ್ಟರ್ ಅರುಣಕುಮಾ‌ ಮುರಗುಂಡಿ ಅವರು ತಾ.ಪಂ ಇಒ ಅವರಿಗೆ ಕೋರಿದ್ದರು. ಅಲ್ಲದೇ ಪ್ರೀತಿ ರಾಜ್ ಅವರು ನರೇಗಾ ಯೋಜನೆಯಡಿ ಉದ್ಯೋಗ ನೀಡುವಂತೆ ಹಲವು ಬಾರಿ ಹೇಳಿದ್ದರೂ ನಿರ್ಲಕ್ಷಿಸಿದ್ದರು. ತೆರಿಗೆ ವಸೂಲಾತಿಯಲ್ಲಿ ಕಳಪೆ ಸಾಧನೆ ಮಾಡಿದ್ದರು ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಗ್ರಾ.ಪಂ. ಗುರಿಗೆ ಅನುಗುಣವಾಗಿ ಕಾರ್ಯಾದೇಶ ನೀಡಲು ವಿಫಲರಾಗಿದ್ದರು. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಪ್ರೀತಿ ರಾಜ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ .

ಅಮಾನತ್ತಿನ ಅವಧಿಯಲ್ಲಿ ನೌಕರರು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರಸ್ಥಾನವನ್ನು ಬಿಡತಕ್ಕದಲ್ಲ ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ – 1957ರ ನಿಯಮ 98ರ ಅನುಸಾರ ಜೀವನ ನಿರ್ವಹಣೆ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಶಿಸ್ತು ಪ್ರಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *