ಎಟಿಎಂಗೆ ಹಾಕಬೇಕಿದ್ದ ಕೋಟ್ಯಂತರ ರೂ. ಹಣ ಗುಳುಂ: ಸಿಬ್ಬಂದಿ ವಿರುದ್ಧ ಶಂಕೆ

ಜಿಲ್ಲೆ

ಸುದ್ದಿ ಸಂಗ್ರಹ ಹಾಸನ
ನಗರದ ಎಟಿಎಂಗಳಿಗೆ ಹಾಕಬೇಕಿದ್ದ ಕೋಟಿ ಕೋಟಿ ರೂ. ಹಣವನ್ನು ತಾವೆ ಲಪಟಾಯಿಸಿ ಕಂಪನಿಗೆ ಸುಳ್ಳು ಲೆಕ್ಕ ನೀಡಿರುವ ಗಂಭೀರ ಆರೋಪ ಸಿಎಂಎಸ್ ಕಂಪನಿ ವಿರುದ್ಧ ಕೇಳಿ ಬಂದಿದೆ. ಕಂಪನಿಯ ಸಿಬ್ಬಂದಿ ನಂದೀಶ್ ಹಾಗೂ ಮಧು ಎಂಬವರು ಕೋಟ್ಯಂತರ ರೂ. ಹಣ ನುಂಗಿ ಹಾಕಿದ್ದಾರೆ ಎಂದು ಶಂಕಿಸಲಾಗಿದೆ. ಬೆಂಗಳೂರಿನಿಂದ ಆಗಮಿಸಿರುವ ಕಂಪನಿಯ ಅಧಿಕಾರಿಗಳು ಆಡಿಟ್ ಮಾಡಿಸುತ್ತಿದ್ದಾರೆ.

ಹಾಸನ ನಗರದ ಗೌರಿಕೊಪ್ಪಲಿನಲ್ಲಿ ಕ್ಯಾಶ್ ಮ್ಯಾನೆಜ್‍ಮೆಂಟ್ ಸರ್ವಿಸಸ್ ಕಚೇರಿಯಿದ್ದು, ಪ್ರತಿನಿತ್ಯ ನಗರದಲ್ಲಿರುವ ಕೆನರಾ ಬ್ಯಾಂಕ್, ಎಸ್‍ಬಿಐ, ಬ್ಯಾಂಕ್ ಆಫ್ ಬರೋಡ, ಐಡಿಬಿಐ, ಕರ್ನಾಟಕ ಬ್ಯಾಂಕ್, ಐಸಿಐಸಿಐ, ಆಕ್ಸಿಸ್ ಬ್ಯಾಂಕ್‌ ಸೇರಿ ಒಟ್ಟು 15 ಬ್ಯಾಂಕ್‍ಗಳ 28 ಎಟಿಎಂಗಳಿಗೆ ಹಣ ಹಾಕಲಾಗುತ್ತಿತ್ತು. ಸರಿಯಾಗಿ ಹಣ ಹಾಕಿದ್ದಾರೋ ಇಲ್ಲವೋ ಎಂಬ ಬಗ್ಗೆ ತಿಂಗಳಿಗೆ ಎರಡು ಬಾರಿ ಆಡಿಟ್ ಮಾಡಲಾಗುತ್ತದೆ. ಫೆ.6 ರಂದು ಆಡಿಟ್ ಮಾಡಿದಾಗ ಎಲ್ಲಾ ಎಟಿಎಂಗಳಿಗೆ ಸಿಬ್ಬಂದಿಗಳು ಸರಿಯಾಗಿ ಹಣ ಹಾಕಿರುವುದು ಆಡಿಟ್ ವರದಿಯಲ್ಲಿ ಲಭ್ಯವಾಗಿತ್ತು.

ಫೆ.18 ರಂದು ಮತ್ತೆ ಆಡಿಟ್ ಮಾಡಿದಾಗ ಕೋಟ್ಯಂತರ ರೂ. ವ್ಯತ್ಯಾಸ ಬಂದಿದೆ. ಅಂದಾಜು 2 ಕೋಟಿಗೂ ಹೆಚ್ಚು ಹಣವನ್ನು ಸಿಎಂಎಸ್ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ನಂದೀಶ್ ಹಾಗೂ ಮಧು ಎಂಬುವವರು ಎಟಿಎಂಗಳಿಗೆ ಹಣ ಹಾಕಲು ತೆರಳಿದ್ದ ವೇಳೆ ಹಣ ಹಾಕದೆ. ಹಣ ಹಾಕಿರುವುದಾಗಿ ಎಂಟ್ರಿ ಮಾಡಿ ದುಡ್ಡನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬೆಂಗಳೂರಿನಿಂದ ಸಿಎಂಎಸ್ ಕಂಪನಿಯ ಮೇಲಾಧಿಕಾರಿಗಳು ಹಾಸನಕ್ಕೆ ಆಗಮಿಸಿ ಮತ್ತೊಮ್ಮೆ ಆಡಿಟ್ ಮಾಡಿಸುತ್ತಿದ್ದಾರೆ. ಇಂದು (ಫೆ.19) ರಾತ್ರಿ ವೇಳೆಗೆ ಆಡಿಟ್ ಮುಗಿಯಲಿದ್ದು ಎಷ್ಟು ಕೋಟಿ ಹಣ ದುರುಪಯೋಗ ಆಗಿದೆ ಎಂದು ತಿಳಿಯಲಿದೆ. ಇದಾದ ಬಳಿಕ ಬಡಾವಣೆ ಪೊಲೀಸರಿಗೆ ದೂರು ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *