ಚಿತ್ತಾಪುರ: ಮತದಾರರ ಪಟ್ಟಿ ಪರಿಷ್ಕರಣೆ 100% ಅರ್ಜಿ ವಿತರಣೆ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ಚಿತ್ತಾಪುರ
ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಚಿತ್ತಾಪುರ ಮತಕ್ಷೇತ್ರದ 257 ಮತಗಟ್ಟೆಗಳಲ್ಲಿ ಶೇ.100 ರಷ್ಟು ಅರ್ಜಿ ವಿತರಣೆ ಮಾಡಲಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.

ಮತಕ್ಷೇತ್ರದ 257 ಮತಗಟ್ಟೆಗಳಲ್ಲಿ ಒಟ್ಟು 2,51,226 ಮತದಾರರಿದ್ದು ಮಂಗಳವಾರದವರೆಗೆ ಎಲ್ಲಾ ಮತದಾರರಿಗೆ ಅರ್ಜಿ ವಿತರಿಸಲಾಗಿದೆ. ನೀಡಿರುವ ಅರ್ಜಿಗಳನ್ನು ಭರ್ತಿ ಮಾಡಿಕೊಟ್ಟಿರುವ ಮತದಾರರ ಅರ್ಜಿಗಳ ಪೈಕಿ ಒಟ್ಟು 94,250 ಅರ್ಜಿಗಳನ್ನು ಡಿಜಿಟಲೈಸ್ ಮಾಡಲಾಗಿದ್ದು ಶೇ.37.52 ರಷ್ಟು ಸಾಧನೆಯಾಗಿದೆ ಎಂದು ಹೇಳಿದ್ದಾರೆ.

ಬಿಎಲ್ಒಗಳು ತಮಗೆ ವಹಿಸಿರುವ ಮತಗಟ್ಟೆ ವ್ಯಾಪ್ತಿಯ ಮನೆಮನೆಗೆ ಭೇಟಿ ನೀಡಿ ಮತದಾರರಿಗೆ ನೀಡಿರುವ ಅರ್ಜಿಗಳನ್ನು ಭರ್ತಿ ಮಾಡಲು ವಿಳಂಬ ಮಾಡದೆ ಭರ್ತಿ ಮಾಡಿ ಮರಳಿ ಕೊಡಬೇಕು. ಭರ್ತಿ ಮಾಡಿಕೊಟ್ಟಿರುವ ಅರ್ಜಿಗಳನ್ನು ಡಿಜಿಟಲೈಸ್ ಮಾಡಲು ಬಿಎಲ್ಒ ಅವರಿಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ಯಾವುದೆ ಕಾರಣಕ್ಕೂ ಅರ್ಹ ಮತದಾರರು ಮತದಾರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಎಸ್ಐಆರ್ ಅರ್ಜಿಯನ್ನು ಯಾವುದೆ ದೋಷವಿಲ್ಲದಂತೆ ಭರ್ತಿ ಮಾಡಲು ಮತದಾರರಿಗೆ ಸಹಕರಿಸಿ ಸಹಾಯ ಮಾಡುವಂತೆ ಗಮನ ಹರಿಸಬೇಕು ಎಂದು ಅರಿವು ಮೂಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *