ಪೊಲೀಸ್ ವಾಹನದಲ್ಲಿ ಶೂಟ್‌: ಕಲಬುರಗಿ ಪೇದೆ ಆತ್ಮಹತ್ಯೆ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ನಗರದ ಹೃದಯಭಾಗವಾದ ಜಗತ್ ವೃತ್ತದಲ್ಲಿ ಸಾರ್ವಜನಿಕರು ಬೆಚ್ಚಿಬೀಳುವಂತಹ ಘಟನೆ ಸಂಭವಿಸಿದೆ. ಕರ್ತವ್ಯ ನಿರತರಾಗಿದ್ದ ಪೊಲೀಸ್ ಪೇದೆಯೊಬ್ಬರು ತಮಗೆ ನೀಡಲಾಗಿದ್ದ ಸರ್ಕಾರಿ ರೈಫಲ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜೇವರ್ಗಿ ತಾಲೂಕಿನ ಮಾವನೂರ ಗ್ರಾಮದ ಶಿವಕುಮಾರ ಶಿವಶರಣಪ್ಪ ನರಿಬೋಳ (32) ಮೃತರು. ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.‌

ಜಗತ್‌ ವೃತ್ತದಲ್ಲಿ ಮಂಗಳವಾರ ಕರ್ತವ್ಯದ ಅವಧಿಯಲ್ಲೆ ಶಿವಕುಮಾರ್ ರಾತ್ರಿ 9 ಗಂಟೆಗೆ ಪೊಲೀಸ್ ವಾಹನದಲ್ಲಿ ಕುಳಿತಿದ್ದಾಗ ತಮ್ಮ ಬಳಿಯಿದ್ದ ಸರ್ಕಾರಿ ರೈಫಲ್’ನಿಂದ ಶೂಟ್ ಮಾಡಿಕೊಂಡಿದ್ದಾರೆ. ಗುಂಡಿನ ಶಬ್ದ ಕೇಳಿ ಸಹೋದ್ಯೋಗಿಗಳು ಓಡಿ ಬರುವಷ್ಟರಲ್ಲಿ ಅವರು ರಕ್ತದ ಮಡುವಿನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ‌.

ಶಿವಕುಮಾರ ಅವರು 2016ರಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೆಲಸ ಮಾಡಿದ್ದರು. ಅಂತರ ಜಿಲ್ಲಾ ವರ್ಗಾವಣೆ ಮೂಲಕ ಇದೆ ವರ್ಷದ ಫೆಬ್ರುವರಿಯಲ್ಲಿ ಕಲಬುರಗಿ ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಗೆ ವರ್ಗಾವಣೆಯಾಗಿ ಬಂದಿದ್ದರು.

ಘಟನೆ ನಡೆದ ತಕ್ಷಣ ಜಗತ್ ವೃತ್ತದ ಬಳಿ ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ, ಉಪ ಪೊಲೀಸ್ ಆಯುಕ್ತರಾದ ಶಾಲೂ, ಎಸಿಪಿ ಶರಣಬಸಪ್ಪ ಸುಬೇದಾರ, ಪಿಐಗಳಾದ ಮಹಾಂತೇಶ ಪಾಟೀಲ, ನಗರ ಮೀಸಲು ಪಡೆಯ ಇನ್‌ಸ್ಪೆಕ್ಟರ್ ಮಹಾದೇವ ಪಾಟೀಲ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *