ಸುದ್ದಿ ಸಂಗ್ರಹ ಬೆಂಗಳೂರು
ರಾಜ್ಯ ಪೊಲೀಸ್ ಇಲಾಖೆಯ ಮಿಕ್ಕುಳಿದ (ಉಳಿದ ಮೂಲ) ವೃಂದದಲ್ಲಿನ ವಿವಿಧ ಜಿಲ್ಲಾ, ನಗರ ಹಾಗೂ ಘಟಕಗಳಲ್ಲಿ ಖಾಲಿ ಇರುವ ಒಟ್ಟು 3,395 ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ರಾಜ್ಯದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ನೇಮಕಾತಿಯ ಪ್ರಮುಖ ಪ್ರಕ್ರಿಯೆಯಾದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಲಿದ್ದು, ಆಫ್ಲೈನ್-ಒಎಂಆರ್ ಮಾದರಿಯಲ್ಲಿ ಪರೀಕ್ಷೆಗಳು ಜರುಗಲಿವೆ ಎಂದು ಹೇಳಿದ್ದಾರೆ.
ಒಟ್ಟು 3,395 ಹುದ್ದೆಗಳಲ್ಲಿ ಪುರುಷ ಅಭ್ಯರ್ಥಿಗಳಿಗೆ 2,266, ಮಹಿಳಾ ಅಭ್ಯರ್ಥಿಗಳಿಗೆ 755, ಸೇವಾನಿರತ ಪುರುಷರಿಗೆ 257, ಸೇವಾನಿರತ ಮಹಿಳೆಯರಿಗೆ 82 ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ 35 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 37,500 ರೂ ರಿಂದ 76,100 ರೂ ವರೆಗಿನ ವೇತನ ಶ್ರೇಣಿ ಅನ್ವಯವಾಗಲಿದ್ದು, ರಾಷ್ಟ್ರೀಯ ಪಿಂಚಣಿ ಯೋಜನೆ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಪಿಯುಸಿ ಅಥವಾ ಸಿಬಿಎಸ್’ಇ, ಐ.ಎಸ್.ಸಿ, ಎನ್.ಐ.ಓ.ಎಸ್ ಮತ್ತು ಮೂರು ವರ್ಷಗಳ ಡಿಪ್ಲೊಮಾ ಸೇರಿದಂತೆ ಸರ್ಕಾರದ ನಿಯಮಾವಳಿಗಳನ್ವಯ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಜನ್ಮ ದಿನಾಂಕದ ಆಧಾರದ ಮೇಲೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕಾಗಿದ್ದು, ಸರ್ಕಾರವು ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಿದೆ. ಇದರನ್ವಯ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 33 ವರ್ಷ, SC/ST ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 35 ವರ್ಷ ಹಾಗೂ ಬುಡಕಟ್ಟು ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 8 ಜೂನ್ 2026 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 3 ಜುಲೈ 2026 ಕೊನೆಯ ದಿನವಾಗಿರುತ್ತದೆ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಲಿಂಕ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕಿದ್ದು, ಹೆಚ್ಚಿನ ಮಾಹಿತಿ ಹಾಗೂ ತಾಂತ್ರಿಕ ನೆರವಿಗಾಗಿ ಪ್ರಾಧಿಕಾರದ ಮಾಹಿತಿ ಕೇಂದ್ರದ ದೂರವಾಣಿ ಸಂಖ್ಯೆ: 080-23460460 ಅನ್ನು ಸಂಪರ್ಕಿಸಬಹುದು ಅಥವಾ ಅಧಿಕೃತ ‘X’ ಖಾತೆ @KEA_KARNATAKA ವೀಕ್ಷಿಸಬಹುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.