ಸುದ್ದಿ ಸಂಗ್ರಹ ಭುವನೇಶ್ವರ
ಕೆಲ ವರ್ಷಗಳ ಹಿಂದೆ 6,000 ರೂ. ವೇತನಕ್ಕೆ ಜೂನಿಯರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ್ದ ವ್ಯಕ್ತಿಯೊಬ್ಬರ ಬಳಿ ಬರೋಬ್ಬರಿ 2 ಕೋಟಿ ನಗದು ಹಣ, 5 ಬಹುಮಹಡಿ ಕಟ್ಟಡ ಮತ್ತು 14 ಸೈಟುಗಳಿರುವುದು ಪತ್ತೆಯಾಗಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸರ್ಕಾರಿ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳ ತಂಡ ಎಂಜಿನಿಯರ್ ಬೈಕುಂಠ ನಾಥ್ ಬೆಹೆರಾಗೆ ಸಂಬಂಧಿಸಿದ 9 ಸ್ಥಳಗಳಲ್ಲಿ ದಾಳಿ ನಡೆಸಿದ ವೇಳೆ ಈ ರಹಸ್ಯ ಬಯಲಾಗಿದೆ. ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಬೆಹರಾ ಅವರಿಗೆ ಸೇರಿದ ಬ್ಯಾಂಕ್ ಲಾಕರ್‌ಗಳಿಂದ ಸುಮಾರು 2 ಕೋಟಿ ನಗದು ವಶಪಡಿಸಿಕೊಂಡಿದೆ.
ಭುವನೇಶ್ವರದ ವಿಶೇಷ ವಿಜಿಲೆನ್ಸ್ ಕೋರ್ಟ್ ಜಾರಿಗೊಳಿಸಿದ್ದ ವಾರಂಟ್ ಆಧಾರದ ಮೇಲೆ ಒಡಿಶಾ ವಿಜಿಲೆನ್ಸ್ ತಂಡ ದಾಳಿ ನಡೆಸಿದೆ. ಚಂದ್ರಶೇಖರಪುರ, ಶೈಲಶ್ರೀ ವಿಹಾರ್, ಕಾನನ್ ವಿಹಾರ್, ಜಾಜ್‌ಪುರ ಜಿಲ್ಲೆಯ ಧರ್ಮಸಾಲ, ಬರಿಪಾದ, ಬಾಲಿಗುಡದಲ್ಲಿರುವ ಅವರ ಅಧಿಕೃತ ನಿವಾಸ ಮತ್ತು ಅವರ ಕಚೇರಿ ಕೊಠಡಿಯಲ್ಲಿನ ನಿವಾಸಗಳಲ್ಲಿ ಈ ಶೋಧ ಕಾರ್ಯ ನಡೆದಿದೆ.

ಭುವನೇಶ್ವರ, ಬಾಲಸೋರ್, ಜಾಜ್‌ಪುರ ಮತ್ತು ಬಾಲಿಗುಡದಾದ್ಯಂತ ನಡೆಸಲಾದ ಶೋಧದ ವೇಳೆ ಭೂದಾಖಲೆ, ಮನೆ, ನಗದು ಸೇರಿದಂತೆ ಅಪಾರ ಪ್ರಮಾಣದ ಆಸ್ತಿಗಳು ಪತ್ತೆಯಾಗಿವೆ.
ಎಂಜಿನಿಯರ್ ಮತ್ತು ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ 5 ಬಹುಮಹಡಿ ಕಟ್ಟಡಗಳು, ಭುವನೇಶ್ವರದ ನೀಲಾದ್ರಿ ವಿಹಾರ್‌ನಲ್ಲಿ ಸುಮಾರು 10,500 ಚದರ ಅಡಿ ವಿಸ್ತೀರ್ಣದ 4 ಅಂತಸ್ತಿನ ಕಟ್ಟಡವೂ ಪತ್ತೆಯಾಗಿದೆ. ಅಲ್ಲದೆ ಭುವನೇಶ್ವರ ಮತ್ತು ಜಾಜ್‌ಪುರ ಜಿಲ್ಲೆಯಲ್ಲಿ 4 ಇತರ ವಸತಿ ಆಸ್ತಿಗಳನ್ನೂ ಅಧಿಕಾರಿಗಳು ಸಹ ಪತ್ತೆಹಚ್ಚಿದ್ದಾರೆ. ಭುವನೇಶ್ವರದ ಪ್ರಮುಖ ಸ್ಥಳಗಳಲ್ಲಿ 7 ಪ್ಲಾಟ್‌ಗಳು, ಜಾಜ್‌ಪುರ ಮತ್ತು ಬರಿಪಾದದಲ್ಲಿ ಹಲವಾರು ಪ್ಲಾಟ್‌ಗಳು ಸೇರಿದಂತೆ 13 ಸೈಟುಗಳನ್ನು ಬೆಹೆರಾ ಹೊಂದಿರುವುದು ಕಂಡುಬಂದಿದೆ.

ಕುಟುಂಬಕ್ಕೆ ಸಂಬಂಧಿಸಿದ ಬ್ಯಾಂಕ್ ಲಾಕರ್‌ಗಳಲ್ಲಿ ಸುಮಾರು 2 ಕೋಟಿ ರೂ. ನಗದು ಪತ್ತೆಯಾಗಿದೆ. ಸದ್ಯ ಎಸ್ಪಿ, ಡಿವೈಎಸ್‌ಪಿ, ಇನ್ಸ್‌ಪೆಕ್ಟರ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಮುಂದುವರಿಸಿದೆ. ಚಿನ್ನಾಭರಣ, ಬ್ಯಾಂಕ್ ಠೇವಣಿ, ಅಂಚೆ ಉಳಿತಾಯ, ಹೂಡಿಕೆಗಳು ಮತ್ತು ಇತರ ಹಣಕಾಸು ಆಸ್ತಿಗಳ ಮೌಲ್ಯಮಾಪನ ನಡೆಸುತ್ತಿದೆ.
ಬೈಕುಂಠ ಬೆಹೆರಾ ಯಾರು ?
ಅಧಿಕೃತ ಮಾಹಿತಿ ಪ್ರಕಾರ, ಬೈಕುಂಠ ನಾಥ್ ಬೆಹೆರಾ 1999ರಲ್ಲಿ ಜೂನಿಯರ್ ಇಂಜಿನಿಯರ್ ಆಗಿ 6,000 ರೂ. ಮಾಸಿಕ ವೇತನಕ್ಕೆ ಕೆಲಸಕ್ಕೆ ಸೇರಿದರು. ಈ ವರ್ಷಾರಂಭದಲ್ಲಿ ಅವರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಬಡ್ತಿ ಪಡೆದರು. ಅದಕ್ಕೂ ಮುನ್ನ ವಿವಿಧ ಬುಡಕಟ್ಟು ಅಭಿವೃದ್ಧಿ ಸಂಸ್ಥೆಗಳು ಮತ್ತು ಎಂಜಿನಿಯರಿಂಗ್ ಕಾರ್ಯಯೋಜನೆಗಳಲ್ಲಿ ಕೆಲಸ ಮಾಡಿದ್ದರು. ಪ್ರಸ್ತುತ ಬೆಹೆರಾ ಕಂಧಮಾಲ್‌ನ ಬಾಲಿಗುಡದಲ್ಲಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಸಂಸ್ಥೆ (ಐಟಿಡಿಎ)ಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಆಗಿ ಕೆಲಸ ಮಾಡುತ್ತಿದ್ದರು.