ನಾಲವಾರ: ಶ್ರಾವಣ ಸಂಭ್ರಮಕ್ಕೆ ವೈಭವದ ಚಾಲನೆ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ನಾಲವಾರ
ಕಲ್ಯಾಣ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠ ಶ್ರಾವಣದ ಸಂಭ್ರಮದಲ್ಲಿ ಭಕ್ತರ ಆರಾಧ್ಯ ಪರಮಪೂಜ್ಯ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಇಷ್ಟಲಿಂಗ ಮಹಾ ಪಾದಪೂಜೆಯೊಂದಿಗೆ ಈ ಬಾರಿಯ ಶ್ರಾವಣ ವೈಭವಕ್ಕೆ ಎರಡನೇ ಗುರುವಾರ ಚಾಲನೆ ನೀಡಲಾಯಿತು.

ಕೈಲಾಸ ಮಂಟಪದ ಸಿದ್ಧಸಿಂಹಾಸನದ ಮೇಲೆ ಪ್ರತಿದಿನ ಗುರುಪಾದ ಪೂಜೆಯ ಝೇಂಕಾರ, ಖ್ಯಾತ ಗಾಯಕರ ಭಕ್ತಿಗೀತೆ, ಮಂತ್ರಘೋಷ, ಇಷ್ಟಲಿಂಗದ ದಿವ್ಯ ದರ್ಶನದೊಂದಿಗೆ ಭಕ್ತರು ಗುರುಗಳ ಪಾದಕ್ಕೆ ನಮಿಸಿ ಕೃತಾರ್ಥರಾಗುತ್ತಿದ್ದಾರೆ.

ಪ್ರತಿದಿನ ಮುಂಜಾನೆ ಕೋರಿಸಿದ್ಧೇಶ್ವರರ ಕರ್ತೃ ಗದ್ದುಗೆಗೆ ವಿಶೇಷ ಅಭಿಷೇಕ, ಮಹಾಮಂಗಳಾರತಿ ನೆರವೇರುತ್ತಿದೆ. ಸಂಜೆ ಗುರುಮಹಾ ಪಾದಪೂಜೆ ಮತ್ತು ಮಹಾಪ್ರಸಾದ ವಿತರಣೆ ನಡೆಯುತ್ತಿದೆ.

ನಾಲವಾರ ಶ್ರೀಮಠ ಶ್ರಾವಣದ ಮತ್ತೊಂದು ವಿಶೇಷವೆಂದರೆ ಪಾದಯಾತ್ರೆ. ನಾಡಿನ ಮೂಲೆ ಮೂಲೆಗಳಿಂದ ನೆರೆಯ ಜಿಲ್ಲೆಗಳಿಂದ ಭಕ್ತರು ಗುಂಪು ಗುಂಪಾಗಿ ಕಾಲ್ನಡಿಗೆಯಲ್ಲಿ ಮಠಕ್ಕೆ ಆಗಮಿಸುತ್ತಿದ್ದಾರೆ. ದವಸ-ಧಾನ್ಯ ಹೊತ್ತು ತಂದು ದಾಸೋಹಕ್ಕೆ ಸಮರ್ಪಿಸುವುದು, ಸೇವೆಯಲ್ಲಿ ಕೈಜೋಡಿಸುವುದು ತಲೆತಲಾಂತರ ಭಕ್ತಿ ಪರಂಪರೆಯಾಗಿದೆ.

ಶ್ರಾವಣವೆಂದರೆ ಕೇವಲ ಪೂಜೆಯಲ್ಲ, ಅದು ಮನಸ್ಸುಗಳು ಬೆಸೆಯುವ ಪವಿತ್ರ ಮಾಸವಾಗಿದೆ. ಅದಕ್ಕೆ ನಾಲವಾರದ ಈ ಸಂಭ್ರಮ ಸಾಕ್ಷಿಯಾಗಿದೆ.

ಈ ಪವಿತ್ರ ಮಾಸದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಪುನೀತರಾಗಬೇಕೆಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *