ಎಬೋಲಾ ಎಂಟ್ರಿ ಆತಂಕದಲ್ಲಿದ್ದ ಕರ್ನಾಟವೀಗ ನಿರಾಳ: ಉಗಾಂಡಾ ಮೂಲದ ಮಹಿಳೆಯ ಸ್ಯಾಂಪಲ್​​ ವರದಿ ನೆಗೆಟಿವ್

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ಎಬೋಲಾ ವೈರಸ್ ಶಂಕಿತ ಪ್ರಕರಣವೊಂದು ಬೆಂಗಳೂರಲ್ಲಿ ಪತ್ತೆಯಾಗಿರೋದು ಭಾರಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ಉಗಾಂಡಾ ಮೂಲದ ಮಹಿಳೆಯ ಎಬೋಲಾ ಪರೀಕ್ಷೆಯ ರಿಪೋರ್ಟ್​​ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೈಸೇರಿದ್ದು, ವರದಿ ನೆಗೆಟಿವ್ ಬಂದಿದೆ. ಹೀಗಾಗಿ ರಾಜ್ಯಕ್ಕೂ ಎಬೋಲಾ ಮಾರಿ ಕಾಲಿಟ್ಟಿತಾ ಎಂಬ ಆತಂಕದಲ್ಲಿದ್ದ ಇಲಾಖೆ ನಿಟ್ಟುಸಿರು ಬಿಟ್ಟಿದೆ.

ಮುಖ್ಯಾಂಶಗಳು

  • ಎಬೋಲಾ ಎಂಟ್ರಿ ಆತಂಕದಲ್ಲಿದ್ದ ಕರ್ನಾಟಕಕ್ಕೆ ಬಿಗ್​​ ರಿಲೀಫ್​​
  • ಉಗಾಂಡಾ ಮೂಲದ ಮಹಿಳೆಯ ಸ್ಯಾಂಪಲ್​​ ವರದಿ ನೆಗೆಟಿವ್​​
  • ನಿಟ್ಟುಸಿರು ಬಿಟ್ಟ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಉಗಾಂಡಾ ದೇಶದ ಕ್ಯಾಂಪಾಲಾ ಮೂಲದ ನಾಗಿರೆ ಲತಿಫಾ (28) ಎಂಬ ಮಹಿಳೆ ಕಳೆದ ಮೇ.23 ರಂದು ಬೆಂಗಳೂರಿಗೆ ಆಗಮಿಸಿದ್ದರು. ಇಲ್ಲಿನ ‘ರಾಯಲ್ ಏಸ್ ಬೂಟಿಕ್’ ಹೋಟೆಲ್‌ನ ರೂಮ್ ನಂಬರ್ 303ರಲ್ಲಿ ತಂಗಿದ್ದ ಆಕೆಗೆ ಎಬೋಲಾ ಮಾದರಿಯ ಆರೋಗ್ಯ ಸಮಸ್ಯೆಗಳು ಇರುವುದು ಗೊತ್ತಾಗುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ, ತಕ್ಷಣವೆ ಆದೇಶ ಹೊರಡಿಸಿ ಆಂಬುಲೆನ್ಸ್ ಮೂಲಕ ಅವರನ್ನು ಐಸೋಲೇಷನ್​​ಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಿತ್ತು. ಜೊತೆಗೆ ಶಂಕಿತ ಮಹಿಳೆಯಿಂದ ರಕ್ತ ಹಾಗೂ ಇತರ ಅಗತ್ಯ ಮಾದರಿಗಳನ್ನು ಸಂಗ್ರಹಿಸಿ, ಈ ಸ್ಯಾಂಪಲ್‌ ಹೆಚ್ಚಿನ ಪರೀಕ್ಷೆಗಾಗಿ ಪುಣೆಯ ಲ್ಯಾಬ್‌ಗೆ ಕಳುಹಿಸಲಾಗಿತ್ತು.

ಉಗಾಂಡಾದ ಕ್ಯಾಂಪಾಲಾ ಮೂಲದ ನಾಗಿರೆ ಲತಿಫಾ ಅವರ ಆರೋಗ್ಯ ಈಗ ಸ್ಥಿರವಾಗಿದ್ದು, ಹೀಗಾಗಿ ಐಸೋಲೇಷನ್​​ನಲ್ಲಿ ಇಡಲಾಗಿದ್ದ ಅವರನ್ನು ಆಸ್ಪತ್ರೆಯಿಂದ ಹೋಟೆಲ್​ಗೆ ಸ್ಥಳಾಂತರ ಮಾಡಲಾಗಿದೆ. ಆದರೂ 21 ದಿನಗಳ ಕಾಲ ನಾಗಿರೆ ಲತಿಫಾ ಕ್ವಾರಂಟೈನ್ ಆಗಬೇಕಿದ್ದು, ಈ ಅವಧಿಯಲ್ಲಿ ಆರೋಗ್ಯ ಇಲಾಖೆ ನಿರಂತರವಾಗಿ ಮಾನಿಟರ್ ಮಾಡಲಿದೆ. ಮತ್ತೆ ರೋಗ ಲಕ್ಷಣ ಕಂಡುಬರದಿದ್ದರೆ ಕ್ಯಾರಂಟೈನ್​ನಿಂದ ಬಿಡುಗಡೆ ಮಾಡಲಾಗುತ್ತದೆ. ಒಂದು ವೇಳೆ ರೋಗಲಕ್ಷಣ ಕಂಡುಬಂದರೆ 2ನೇ ಹಂತದಲ್ಲಿ ಪುಣೆಯ NIV ಲ್ಯಾಬ್​ನಲ್ಲಿ ಸ್ಯಾಂಪಲ್ ಪರಿಶೀಲನೆ ನಡೆಯಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *