ಕಲಬುರಗಿಯ ನೂತನ ಮೃಗಾಲಯ ಲೋಕಾರ್ಪಣೆ: ಬನ್ನೇರುಘಟ್ಟದಿಂದ ಬಂದ ಸಿಂಹಗಳೆ ಆಕರ್ಷಣೆ

ತಾಲೂಕು

ಸುದ್ದಿ ಸಂಗ್ರಹ ಕಾಳಗಿ
ತಾಲೂಕಿನ ಮಾಡಬೂಳ ಗ್ರಾಮದ ವ್ಯಾಪ್ತಿಯಲ್ಲಿ ಅಂದಾಜಯ 35 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಲಬುರಗಿ ‌ಮೃಗಾಲಯವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು.

ಕಲಬುರಗಿ ನಗರದಲ್ಲಿ 1988ರಲ್ಲಿ ಸ್ಥಾಪಿಸಿದ್ದ‌ ಕಿರು ಮೃಗಾಲಯವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸೆಕ್ಷನ್ 38(1) ಅಡಿಯಲ್ಲಿ ಮೃಗಾಲಯ ಸ್ಥಾಪನೆಗೆ ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ರಾಜ್ಯ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮತಿಯೊಂದಿಗೆ ದೊಡ್ಡ ‌ಪ್ರಮಾಣದಲ್ಲಿ ಉನ್ನತೀಕರಿಸಿ ಮತ್ತು ವಿಸ್ತರಿಸಲಾಗಿದೆ.

ಹೊಸ ಮೃಗಾಲಯದಲ್ಲಿ ನಿಶಾಚರ ಪ್ರಾಣಿಗಳಿಗೆ 6, ಭಾರತೀಯ ಪಕ್ಷಿಗಳಿಗೆ 10, ಸಣ್ಣ ಪಕ್ಷಿಗಳಿಗೆ 6, ಫೀಸಂಟ್‌ಗಳಿಗೆ 6, ಸಸ್ತನಿ ತಳಿಗೆ 10, ಪ್ರೈಮೇಟ್‌ಗಳಿಗೆ 4, ಶಾಖಾಹಾರಿ ಪ್ರಾಣಿಗಳಿಗೆ 6 ಮತ್ತು ಉಭಯಚರ/ ಸರೀಸೃಪ ಪ್ರಾಣಿಗಳಿಗೆ 8 ಸೇರಿ ಒಟ್ಟು 56 ಜಾತಿಯ ಪ್ರಾಣಿಗಳಿಗೆ ಆವರಣಗಳು ನಿರ್ಮಾಣವಾಗಲಿವೆ. ಆಮೆ, ಘರಿಯಾಲ್, ಮೊಸಳೆ, ಚುಕ್ಕೆ ಜಿಂಕೆ, ಗೋಲ್ಡನ್ ಜಾಕಲ್, ಹುಲಿ, ಸಿಂಹ, ಸ್ಲೋತ್ ಕರಡಿ, ಜೀಬ್ರಾ, ಬಬೂನ್, ಲಂಗೂರು ಹಾಗೂ ವಿವಿಧ ಪಕ್ಷಿಗಳಿಗಾಗಿ ಒಟ್ಟು 23 ಆವರಣಗಳು ಈಗಾಗಲೆ ಪೂರ್ಣಗೊಂಡಿವೆ.

ಸದ್ಯ ಹೊಸ ಮೃಗಾಲಯದಲ್ಲಿ ಆಮೆಗಳು, ಮೊಸಳೆಗಳು, ಎಮು ಪಕ್ಷಿ, ಸಿಲ್ವರ್ ಪೀಸಂಟ್, ಗಿಳಿಗಳು, ನವಿಲುಗಳು, ಜಾಕಲ್, ಕಪ್ಪು ಗಿಡುಗಗಳು, ಲಂಗೂರ್, ಕಪ್ಪು ಜಿಂಕೆಗಳು, ಹೆಬ್ಬಾವುಗಳಿವೆ. ಬೆಂಗಳೂರಿನ ಬನ್ನೇರುಘಟ್ಟದ ಜೈವಿಕ ಉದ್ಯಾನದಿಂದ ಒಂದೂವರೆ ವರ್ಷ ಪ್ರಾಯದ ಎರಡು ಸಿಂಹಗಳು ಈಗಾಗಲೆ ಕಲಬುರಗಿ ಮೃಗಾಲಯಕ್ಕೆ ಬಂದಿವೆ.

ಇನ್ನೊಂದು ತಿಂಗಳಲ್ಲಿ ಸಾಂಬರ್, ರೆಡ್ ಜಂಗಲ್ ಫೌಲ್ ಬರಲಿವೆ. ಮುಂದಿನ ಮೂರು ತಿಂಗಳಲ್ಲಿ ಹುಲಿ, ಬಬೂನ್, ಸ್ಲೋತ್ ಕರಡಿ, ಕಾಳಿಂಗ ಸರ್ಪ ನೋಡಲು ಸಿಗಲಿವೆ. ಮುಂದಿನ ತಿಂಗಳಲ್ಲಿ ಜಿಬ್ರಾ, ಘರಿಯಾಲ್ ಹಾಗೂ ಇತರೆ ಪಕ್ಷಿ ಮತ್ತು ಸರೀಸೃಪ ಜಾತಿಗಳ ವನ್ಯ ಜೀವಿಗಳು ಕಲಬುರಗಿ ಮೃಗಾಲಯ ಸೇರಲಿವೆ.

ಬೆಳಿಗ್ಗೆ 9.30 ರಿಂದ ಸಂಜೆ 5.30 ವೀಕ್ಷಣೆಗೆ ಲಭ್ಯ
ಮೃಗಾಲಯವು ಬೆಳಿಗ್ಗೆ 9.30 ರಿಂದ ಸಂಜೆ 5.30 ವರೆಗೆ ತೆರೆಯಲಿದ್ದು, ಪ್ರಾಣಿ-ಪಕ್ಷಿಗಳ ವೀಕ್ಷಣೆಗೆ ಲಭ್ಯವಾಗಿರಲಿದೆ. ಪ್ರತಿ ಮಂಗಳವಾರ ರಜೆ ಇರಲಿದೆ. 12 ವರ್ಷ ಮೇಲ್ಪಟ್ಟವರಿಗೆ 75 ರೂ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 40 ರೂಂ ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 25 ರೂ ಟಿಕೆಟ್ ದರ ನಿಗದಿ ಮಾಡಲಾಗಿದೆ. ಮೃಗಾಲಯದ ಟಿಕೆಟ್ ಕೌಂಟರ್‌ನಲ್ಲಿಯೆ ಟಿಕೆಟ್ ಪಡೆದು ವೀಕ್ಷಣೆ ಮಾಡಬಹುದಾಗಿದೆ ಎಂದರು.

Leave a Reply

Your email address will not be published. Required fields are marked *