ಚಿತ್ತಾಪುರ: ಮಾ.5 ರಂದು ತಾಲೂಕಿನ ಆಲಹಳ್ಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ದೇವಿಂದ್ರಪ್ಪ ಭಾಲ್ಕೆ ಅವರು ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರು ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ ಪ್ರಕರಣವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೆ ಇರುವದು ನಾಗಯ್ಯ ಸ್ವಾಮಿ ಅವರ ಆರೋಗ್ಯ ಹದಗೆಡಲು ಪ್ರಮುಖ ಕಾರಣ ಎಂದು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜ್ ಎಸ್ ಮಲ್ಕಂಡಿ ಆರೋಪಿಸಿದ್ದಾರೆ
ಮಾ.6 ರಂದು ದೂರು ನೀಡಿದರೂ ಸ್ಪಂದನೆ ಮಾಡದ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಗಯ್ಯ ಸ್ವಾಮಿ ಅವರು ತೀವ್ರ ಮಾನಸಿಕ ಒತ್ತಡಕ್ಕೊಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಮಾಹಿತಿ ನೀಡುವಂತೆ ಮಾ.1 ರಂದು ನಾಗಯ್ಯಸ್ವಾಮಿ ಅವರು ಮಾಹಿತಿ ಹಕ್ಕು ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಮಾ.5 ರಂದು ಪಿಡಿಒ ಅವರು ನಾಗಯ್ಯ ಅವರಿಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಲು ಅರ್ಜಿ ಹಾಕಿದ್ದು, ನಿನ್ನ ವಿರುದ್ಧ ಪ್ರಕರಣ ದಾಖಲಿಸಿ ಒಳಗೆ ಹಾಕಿಸುತ್ತೆನೆ ಎಂದು ಪಿಡಿಓ ಬೆದರಿಕೆ ಹಾಕಿದ್ದರು ಎಂದು ಸ್ವಾಮಿ ತಿಳಿಸಿದ್ದರು. ಜೊತೆಗೆ ನನಗೆ ಬಿಪಿ ಇದೆ. ನನ್ನ ಜೀವಕ್ಕೆ ಏನಾದರೂ ಆದರೆ ಪಿಡಿಒ ಅವರೆ ಕಾರಣ ಎಂದಿದ್ದರು.
ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾ.6 ರಂದು ತಾಲೂಕು ಪಂಚಾಯಿತಿ ಅಧಿಕಾರಿಗೆ, ಮರು ದಿವಸ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ನೀಡಿದ್ದಾರೆ. ಆದರೆ ಅಧಿಕಾರಿಗಳು ಬೆದರಿಕೆ ಕರೆ ಮಾಡಿದ ದೂರನ್ನು ನಿರ್ಲಕ್ಷಿಸಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಿಡಿಒ ಅವರು ಬೆದರಿಕೆ ಹಾಕಿದ್ದರಿಂದ ನನಗೆ ಭಯವಾಗುತ್ತಿದೆ. ನನ್ನ ಜೀವಕ್ಕೆ ಏನಾದರೂ ಆದರೆ ಅವರೆ ಕಾರಣ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾ.17 ರಂದು ಚಿತ್ತಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಕುರಿತು ತಕ್ಷಣ ಕ್ರಮ ಕೈಗೊಳ್ಳದೆ ಕಡೆಗಣಿಸಿದ್ದರಿಂದ ಬಿಪಿ ಹೆಚ್ಚಾಗಿ ತೀವ್ರ ಅನಾರೋಗ್ಯಕ್ಕೊಳಗಾಗಿ ಧಿಡೀರ್ ಪ್ರಜ್ಞಾಹೀನ ಸ್ಥಿತಿಗೊಳಗಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಈಗಲೂ ಕೂಡ ಪ್ರಜ್ಞಾಹೀನ ಸ್ಥಿತಿಯಲ್ಲಿ ಜೀವನ್ಮರಣ ಸಂಘರ್ಷ ನಡೆಸುತ್ತಿದ್ದಾರೆ. ಅವರ ಈ ಸ್ಥಿತಿಗೆ ಅಧಿಕಾರಿಗಳ ನಿರ್ಲಕ್ಷತನ, ಬೇಜಾಬ್ದಾರಿತನ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ