ಕಲಬುರಗಿಯಲ್ಲಿ ರೌಡಿಗಳ ಪರೇಡ್‌: ಮತ್ತೆ ಬಾಲ ಬಿಚ್ಚಿದ್ರೆ ಹುಷಾರ್‌

ನಗರದ

ಸುದ್ದಿ ಸಂಗ್ರಹ ಕಲಬುರಗಿ
ನಗರದಲ್ಲಿ ಶನಿವಾರ 327 ರೌಡಿಗಳ ಪರೇಡ್‌ ನಡೆಸಿದ ಪೊಲೀಸ್‌ ಕಮಿಷನರ್‌ ಶರಣಪ್ಪ ಎಸ್‌.ಡಿ ಅವರು, ಮತ್ತೆ ಬಾಲ ಬಿಚ್ಚಿದ್ರೆ ಹುಷಾರ್‌, ಇನ್ಮುಂದೆ ಒಂದೆ ಒಂದು ಸಣ್ಣ ಕೇಸ್‌ನಲ್ಲಿ ಭಾಗಿಯಾದ್ರೂ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಗರದ ಸಿಎಆರ್‌ ಪರೇಡ್ ಮೈದಾನದಲ್ಲಿ ಈ ರೌಡಿಗಳ ಪರೇಡ್‌ ನಡೆಯಿತು. ನಗರ ಪೊಲೀಸ್‌ ಆಯುಕ್ತಾಲಯ ವ್ಯಾಪ್ತಿಯಲ್ಲಿನ 10 ಪೊಲೀಸ್‌ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಶನಿವಾರ ಬೆಳ್ಳಂಬೆಳಗ್ಗೆ ರೌಡಿಗಳ ಮನೆ ತಪಾಸಣೆ ನಡೆಸಿದರು. ಬೆಳಕು ಹರಿಯುತ್ತಿದ್ದಂತೆ 327 ರೌಡಿಗಳನ್ನು ಪೊಲೀಸ್‌ ಪರೇಡ್‌ ಮೈದಾನದಲ್ಲಿ ಹಾಜರುಪಡಿಸಿದ್ದರು.

ಬೆಳಿಗ್ಗೆ ಸುಮಾರು 9.55ಕ್ಕೆ ರೌಡಿಗಳ ಪರೇಡ್‌ ಆರಂಭಿಸಿದ ಪೊಲೀಸ್‌ ಕಮಿಷನರ್‌, ಸುಡು ಬಿಸಿಲನ್ನು ಲೆಕ್ಕಿಸದೇ ಪ್ರತಿ ರೌಡಿಯ ವಿಚಾರಣೆ ನಡೆಸಿದರು. ಎಲ್ಲ ರೌಡಿಗಳ ವಿಚಾರಣೆ ಮುಗಿಯುವಷ್ಟರಲ್ಲಿ ಗಂಟೆ 11.45 ಆಗಿತ್ತು. ರೌಡಿಗಳು ಯಾವ ಪ್ರಕರಣದಲ್ಲಿ ಭಾಗಿ, ಅವರ ವಿರುದ್ಧದ ಒಟ್ಟಾರೆ ಪ್ರಕರಣ ಎಷ್ಟು? ಈಗ ಚಾಲ್ತಿಯಲ್ಲಿರುವ ಪ್ರಕರಣ ಎಷ್ಟು? ಮಾಡಿಕೊಂಡಿರುವ ಕೆಲಸ ಏನು? ಎಂದು ಕೇಳಿ ವಿವರ ಪಡೆದರು. ಮತ್ತೊಮ್ಮೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆಯೂ ನೀಡುತ್ತಿದ್ದರು.

ರೌಡಿಗಳ ಸಾಲಿನಲ್ಲಿ ಚಿಕ್ಕ ವಯಸ್ಸಿನವರನ್ನು ಕಂಡ ಕಮಿಷನರ್‌ ಅವರು, ನೀನು ಕಾಲೇಜು ಸ್ಟುಡೆಂಟಾ ? ಯಾವ ಕಾಲೇಜು ? ಸ್ಕೋರ್‌ ಎಷ್ಟು ? ಎಂದು ಕೇಳಿದರು. ವಿಚಿತ್ರ ಕೇಶವಿನ್ಯಾಸ ಹೊಂದಿದವರಿಗೆ ಶಿಸ್ತಿನ ಪಾಠ, ಮತ್ತೆ ಕೆಲವರಿಗೆ ಜೀವನದ ಪಾಠವನ್ನೂ ಮಾಡಿದರು. ಒಳ್ಳೆಯವರಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸಿ ಎಂದೂ ಸಲಹೆ ನೀಡಿದರು.

ದುರ್ನಡತೆ ಮತ್ತು ರೂಢಿಗತವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದರಿಂದ ರೌಡಿಶೀಟ್‌ ತೆರೆಯಲಾಗಿದೆ. ಯಾವ ಕಾರಣಕ್ಕಾಗಿ ನೀವು ಅಪರಾಧಗಳಲ್ಲಿ ಭಾಗಿಯಾಗಿದ್ದಿರಿ ಎಂಬುದು ಗತಿಸಿಹೋದ ವಿಷಯ. ಈಗ ನಿಮ್ಮ ಮುಂದಿರುವ ದಾರಿ ಎಂದರೆ ಬದಲಾ ವಣೆ ತಂದುಕೊಳ್ಳುವುದು. ಬದಲಾವಣೆ ತಂದುಕೊಂಡವರಿಗೆ ತೊಂದರೆ ಕೊಡುವ ಅವಶ್ಯಕತೆ ಮತ್ತು ಉದ್ದೇಶವಿಲ್ಲ. 10 ವರ್ಷಗಳಿಂದ ಯಾವುದೇ ಪ್ರಕರಣದಲ್ಲಿ ಭಾಗಿಯಾಗದೇ ಇರುವವರನ್ನು ಪರಿಶೀಲಿಸಿ ರೌಡಿಶೀಟ್‌ ಪಟ್ಟಿಯಿಂದ ಕೈಬಿಡಲಾಗುವುದು’ ಎಂದು ತಿಳಿಸಿದರು.

‘ಪೊಲೀಸ್‌ ಠಾಣೆವಾರು ರೌಡಿ ಪರೇಡ್‌ ನಡೆಸಬೇಕು. ಮನೆ, ವಾಹನಗಳನ್ನು ನಿಯಮಿತವಾಗಿ ತಪಾಸಣೆ ನಡೆಸಬೇಕು. ಸಾಮಾಜಿಕ ಜಾಲತಾಣ ಮತ್ತು ರೌಡಿಗಳ ಮೇಲೆ ನಿಗಾ ವಹಿಸಬೇಕು’ ಎಂದು ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳಿಗೆ ಇದೇ ಸಂದರ್ಭದಲ್ಲಿ ಸೂಚಿಸಿದರು.

ಪರೇಡ್‌ ವೇಳೆ ಮೂರ್ಛೆರೋಗದಿಂದ ಕುಸಿದುಬಿದ್ದ ರೌಡಿಯೊಬ್ಬನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಡಿಸಿಪಿಗಳಾದ ಶಾಲೂ, ಪ್ರವೀಣ ಎಚ್.ನಾಯಕ್, ಸಹಾಯಕ ಪೊಲೀಸ್‌ ಆಯುಕ್ತರು, ಇನ್‌ಸ್ಪೆಕ್ಟರ್‌ಗಳು ಮತ್ತು ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *