ಮೇ 1ರಿಂದ ಎಲ್​ಪಿಜಿ ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ

ನವದೆಹಲಿ

ಸುದ್ದಿ ಸಂಗ್ರಹ ನವದೆಹಲಿ
ಮೇ 1 ರಿಂದ ಭಾರತದಾದ್ಯಂತ ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್ ಮತ್ತು ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿದ್ದು, ಇದು ಲಕ್ಷಾಂತರ ಕುಟುಂಬಗಳ ಮೇಲೆ ಪ್ರಭಾವ ಬೀರಲಿದೆ. ಹೊಸ 3 ನಿಯಮ ಜಾರಿಗೆ ಬರಲಿದೆ.

ಸಬ್ಸಿಡಿ ಗ್ಯಾಸ್ ಕಾಳಸಂತೆಕೋರರ ಪಾಲಾಗುವುದನ್ನು ಮತ್ತು ಅಕ್ರಮ ದಾಸ್ತಾನು ಮಾಡುವುದನ್ನು ತಡೆಯಲು ಪ್ರಮುಖ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ , ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಈ ಹೊಸ ನಿಯಮಗಳನ್ನು ಜಾರಿಗೆ ತರುತ್ತಿವೆ.

ಸಿಲಿಂಡರ್ ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆ
ನಗರ ಪ್ರದೇಶಗಳಲ್ಲಿ ಎರಡು ಎಲ್‌ಪಿಜಿ ಬುಕ್ಕಿಂಗ್‌ಗಳ ನಡುವಿನ ಅಂತರವನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಅಂತರವನ್ನು 45 ದಿನಗಳಿಗೆ ವಿಸ್ತರಿಸಲಾಗಿದೆ. ನಿಗದಿತ ದಿನಗಳಿಗಿಂತ ಮುಂಚಿತವಾಗಿ ಬುಕ್ ಮಾಡಲು ಪ್ರಯತ್ನಿಸಿದರೆ, ಸಿಸ್ಟಮ್ ಸ್ವಯಂಚಾಲಿತವಾಗಿ ಆ ಬುಕ್ಕಿಂಗ್ ಅನ್ನು ತಡೆಹಿಡಿಯುತ್ತದೆ.

ಒಟಿಪಿ ಆಧಾರಿತ ವಿತರಣೆ ಕಡ್ಡಾಯ
ಹೊಸ ಮಾರ್ಗಸೂಚಿಗಳ ಪ್ರಕಾರ, ಮೇ 1 ರಿಂದ ‘ಡೆಲಿವರಿ ಅಥೆಂಟಿಕೇಶನ್ ಕೋಡ್’ ಕಡ್ಡಾಯವಾಗಲಿದೆ. ಇನ್ನು ಮುಂದೆ ಕೇವಲ ಗ್ಯಾಸ್ ಬುಕ್ ಅಥವಾ ರಶೀದಿಯನ್ನು ತೋರಿಸಿ ಸಿಲಿಂಡರ್ ಪಡೆಯಲು ಸಾಧ್ಯವಿಲ್ಲ. ಗ್ರಾಹಕರು ಸಿಲಿಂಡರ್ ಬುಕ್ ಮಾಡಿದಾಗ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಡೆಲಿವರಿ ಬಾಯ್‌ಗೆ ಈ ಒಟಿಪಿ ನೀಡಿದರಷ್ಟೇ ಸಿಲಿಂಡರ್ ಕೈಸೇರಲಿದೆ. ಗ್ಯಾಸ್ ಅಕ್ರಮಗಳನ್ನು ತಡೆಯಲು ಈಗಾಗಲೇ ಶೇ. 94.5 ರಷ್ಟು ಎಲ್‌ಪಿಜಿ ವಿತರಣೆಯನ್ನು ಈ ಕೋಡ್ ಮೂಲಕವೇ ಮಾಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಸಿಲಿಂಡರ್ ಬೆಲೆ ಏರಿಕೆ ಸಾಧ್ಯತೆ
ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ, ಭಾರತೀಯ ತೈಲ ಕಂಪನಿಗಳು ಈಗಾಗಲೇ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆಯನ್ನು 60 ರೂ.ಗಳಷ್ಟು ಹೆಚ್ಚಿಸಿವೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆಗಳೂ ಅಲ್ಪಾವಧಿಯಲ್ಲಿಯೇ ಮೂರು ಬಾರಿ ಏರಿಕೆಯಾಗಿವೆ. ಮೇ 1 ರಂದು ಸಿಲಿಂಡರ್ ಬೆಲೆಯಲ್ಲಿ ಮತ್ತಷ್ಟು ಏರಿಳಿತವಾಗುವ ನಿರೀಕ್ಷೆಯಿದೆ.

ಉಜ್ವಲ ಯೋಜನೆ ಫಲಾನುಭವಿಗಳಿಗೆ ಇ – ಕೆವೈಸಿ ಕಡ್ಡಾಯ
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣವನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇದುವರೆಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಬಳಕೆದಾರರು ಕೂಡಲೇ ಅದನ್ನು ಮಾಡಿಸಬೇಕು. ಯಾರು ಈ ಹಿಂದೆ ಮಾಡಿಸಿಲ್ಲವೋ, ಅವರಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಪೂರೈಕೆ ಸ್ಥಿತಿಗತಿ ಮತ್ತು ಅಮೆರಿಕದಿಂದ ಆಮದು
ಕಚ್ಚಾ ತೈಲ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ, ಭಾರತೀಯ ತೈಲ ಕಂಪನಿಗಳು ಅಮೆರಿಕದಿಂದ ಹೆಚ್ಚುವರಿ ಎಲ್‌ಪಿಜಿಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಜೂನ್-ಜುಲೈ ವೇಳೆಗೆ ಇದು ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ಭಾರತಕ್ಕೆ ಪ್ರತಿದಿನ ಸುಮಾರು 80,000 ಟನ್ ಎಲ್‌ಪಿಜಿ ಅಗತ್ಯವಿದ್ದು, ನಮ್ಮ ದೇಶೀಯ ಉತ್ಪಾದನೆ ಸರಿಸುಮಾರು 46,000 ಟನ್ ಮಾತ್ರ ಇದೆ.

ಗ್ರಾಹಕರಿಗೆ ಪ್ರಮುಖ ಸಲಹೆ ಏನು ?
ಮೇ 1 ರ ಬದಲಾವಣೆಗಳಿಗೂ ಮುನ್ನ, ಗ್ರಾಹಕರು ತಮ್ಮ ಎಲ್‌ಪಿಜಿ ಖಾತೆಗೆ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಜೊತೆಗೆ ತಮ್ಮ ಮುಂದಿನ ಬುಕ್ಕಿಂಗ್ ದಿನಾಂಕ ಯಾವಾಗ ಬರುತ್ತದೆ ಎಂಬುದನ್ನು MyLPG ಪೋರ್ಟಲ್‌ನಲ್ಲಿ ಪರಿಶೀಲಿಸಿಕೊಳ್ಳುವಂತೆ ತೈಲ ಕಂಪನಿಗಳು ಸಲಹೆ ನೀಡಿವೆ.

Leave a Reply

Your email address will not be published. Required fields are marked *