ಸುದ್ದಿ ಸಂಗ್ರಹ ನವದೆಹಲಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ H1N1 (ಹಂದಿ ಜ್ವರ) ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಇಂದು ತುರ್ತು ಪರಿಶೀಲನಾ ಸಭೆ ಕರೆದಿದ್ದಾರೆ ಎಂದು ಆರೋಗ್ಯ ಸಚಿವ ಪಂಕಜಕುಮಾರ್ ಸಿಂಗ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಮತ್ತು ದೆಹಲಿ ಕ್ಯಾಂಟೋನ್ಮೆಂಟ್ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಅಗತ್ಯ ಪ್ರಮಾಣದಲ್ಲಿ ವೈದ್ಯರು, ಸಿಬ್ಬಂದಿ ಹಾಗೂ ಔಷಧಿಗಳು ಲಭ್ಯವಿವೆ ಎಂದು ಭರವಸೆ ನೀಡಿದ್ದಾರೆ.
3,000ಕ್ಕೂ ಹೆಚ್ಚು ಇನ್ಫ್ಲುಯೆನ್ಸಾ ಪ್ರಕರಣ ವರದಿ
ಈ ವರ್ಷ ದೆಹಲಿಯಲ್ಲಿ ಸುಮಾರು 3,000 ಇನ್ಫ್ಲುಯೆನ್ಸಾ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 2,308 ಪ್ರಕರಣಗಳು H1N1 ಸೋಂಕಿಗೆ ಸಂಬಂಧಿಸಿವೆ. ವೈದ್ಯರು, ಸಿಬ್ಬಂದಿ ಅಥವಾ ಔಷಧಿಗಳ ಯಾವುದೆ ಕೊರತೆಯಿಲ್ಲ. ಮುಖ್ಯಮಂತ್ರಿ ತುರ್ತು ಪರಿಶೀಲನಾ ಸಭೆ ಕರೆದಿದ್ದಾರೆ. ಯಾವುದೆ ಸಮಸ್ಯೆಯಿಲ್ಲ, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಪಂಕಜಕುಮಾರ್ ಸಿಂಗ್ ಹೇಳಿದ್ದಾರೆ.
ಜನಕ್ಕೆ ತೊಂದರೆಯಾದ್ರೆ ಆಸ್ಪತ್ರೆ ವಿರುದ್ಧ ಕ್ರಮ
ಅಲ್ಲದೆ ಜನರು ಆತಂಕಪಡುವ ಅಗತ್ಯವಿಲ್ಲ. ಸೋಂಕಿತರು ಆಸ್ಪತ್ರೆಗೆ ಬರುತ್ತಿದ್ದು, ಸೂಕ್ತ ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದಾರೆ. ಪ್ರತಿಯೊಂದು ಆಸ್ಪತ್ರೆಯಲ್ಲೂ ಐಸೋಲೇಷನ್ ವಾರ್ಡ್‌ಗಳನ್ನ ಸಿದ್ಧಪಡಿಸಲಾಗಿದೆ. ಯಾವುದೆ ರೋಗಿಗೆ ಹಾಸಿಗೆ ನೀಡಲಾಗಿಲ್ಲ ಎಂಬ ದೂರು ಬಂದರೆ ಸಂಬಂಧಿಸಿದ ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಶಾಲೆಗಳಿಗೆ ಸರ್ಕಾರ ವಿಶೇಷ ಸೂಚನೆ
ಇನ್ನೂ ಹಂದಿ ಜ್ವರ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ನಿರ್ದೇಶನಾಲಯವು ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಮಾನ್ಯತೆ ಪಡೆದ ಖಾಸಗಿ ಶಾಲೆಗಳಿಗೆ ಮುನ್ನೆಚ್ಚರಿಕಾ ಸಲಹೆ ಹೊರಡಿಸಿದೆ.
ಶಾಲೆಗಳಿಗೆ ನೀಡಿರುವ ಪ್ರಮುಖ ಸೂಚನೆಗಳೇನು ?
- ಉಸಿರಾಟದ ಸ್ವಚ್ಛತೆ: ಕೆಮ್ಮುವಾಗ ಅಥವಾ ಸೀನುವಾಗ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಬೇಕು. ಬಳಸಿದ ಟಿಶ್ಯೂಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು.
- ಕೈಗಳ ಸ್ವಚ್ಛತೆ: ಸಾಬೂನು ಮತ್ತು ನೀರಿನಿಂದ ನಿಯಮಿತವಾಗಿ ಕೈಗಳನ್ನು ತೊಳೆಯುವಂತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಸೂಚಿಸಬೇಕು. ವಿಶೇಷವಾಗಿ ಊಟಕ್ಕೂ ಮುನ್ನ ಹಾಗೂ ಕೆಮ್ಮಿದ ಅಥವಾ ಸೀನಿದ ಬಳಿಕ ಕೈ ತೊಳೆಯಬೇಕು.
- ಸೋಂಕು ಹರಡುವಿಕೆ ತಡೆ: ಉಸಿರಾಟದ ಸಮಸ್ಯೆಯ ಲಕ್ಷಣಗಳಿರುವ ವ್ಯಕ್ತಿಗಳಿಂದ ಸೂಕ್ತ ಅಂತರ ಕಾಯ್ದುಕೊಳ್ಳಬೇಕು. ಅಗತ್ಯವಿದ್ದಲ್ಲಿ ಮಾಸ್ಕ್ ಬಳಸಬಹುದು.
- ಶಾಲಾ ಸ್ವಚ್ಛತೆ: ತರಗತಿ ಕೊಠಡಿಗಳು, ಸಾಮಾನ್ಯ ಸ್ಥಳಗಳು ಮತ್ತು ಪದೆ ಪದೆ ಸ್ಪರ್ಶಿಸುವ ಮೇಲ್ಮೈಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಸಾಧ್ಯವಾದಷ್ಟು ಉತ್ತಮ ಗಾಳಿಯ ಸಂಚಾರ ಇರುವಂತೆ ನೋಡಿಕೊಳ್ಳಬೇಕು.
- ಉತ್ತಮ ಆರೋಗ್ಯ ಅಭ್ಯಾಸ: ಸಾಕಷ್ಟು ನೀರು ಕುಡಿಯುವುದು, ಪೌಷ್ಟಿಕ ಆಹಾರ ಸೇವಿಸುವುದು, ಸಮರ್ಪಕ ವಿಶ್ರಾಂತಿ ಪಡೆಯುವುದು ಮತ್ತು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಬೇಕು.
- ಮುಖ ಮುಟ್ಟುವುದನ್ನ ತಪ್ಪಿಸಿ: ಕಣ್ಣು, ಮೂಗು ಮತ್ತು ಬಾಯಿಯನ್ನು ಪದೆ ಪದೆ ಮುಟ್ಟುವುದನ್ನು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ತಪ್ಪಿಸಬೇಕು.
- ಸ್ವಯಂ ಔಷಧ ಸೇವನೆ ಬೇಡ: ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯೊಟಿಕ್ ಸೇರಿದಂತೆ ಯಾವುದೆ ಔಷಧಿಗಳನ್ನ ಸೇವಿಸಬಾರದು.
- ಶಾಲೆಯಾಚೆಗೂ ಜಾಗೃತಿ: ಬೆಳಗಿನ ಪ್ರಾರ್ಥನಾ ಸಭೆ, ತರಗತಿ ಚಟುವಟಿಕೆಗಳು, ಸೂಚನಾ ಫಲಕಗಳು, ಪೋಷಕರ ಸಂಪರ್ಕ ಮಾಧ್ಯಮಗಳು ಮತ್ತು ಶಾಲೆಯ ಡಿಜಿಟಲ್ ವೇದಿಕೆಗಳ ಮೂಲಕ H1N1 ಕುರಿತು ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದೆ.
ಆಗಸ್ಟ್ 31ರೊಳಗೆ ವರದಿ ಸಲ್ಲಿಸಲು ಸೂಚನೆ
ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲೆಗಳು ಮತ್ತು ವಲಯಗಳ ಉಪ ನಿರ್ದೇಶಕರಿಗೆ ಈ ಸೂಚನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವಂತೆ ನಿರ್ದೇಶಿಸಲಾಗಿದೆ. ಕೈಗೊಂಡಿರುವ ಕ್ರಮಗಳ ಕುರಿತು ಸಂಗ್ರಹಿತ ವರದಿಯನ್ನು ಆಗಸ್ಟ್ 31ರೊಳಗೆ ಶಿಕ್ಷಣ ನಿರ್ದೇಶನಾಲಯದ ಆರೋಗ್ಯ ಶಾಲಾ ವಿಭಾಗಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.