ಸುದ್ದಿ ಸಂಗ್ರಹ ಕೊಪ್ಪಳ
ಹನುಮ ಜಯಂತಿ ಹಿನ್ನೆಲೆ ಇಂದು ಅಂಜನಾದ್ರಿಗೆ ಹನುಮ ಮಾಲಾಧಾರಿಗಳು ಆಗಮಿಸಿ ಮಾಲೆಯನ್ನು ವಿಸರ್ಜನೆ ಮಾಡಿದರು.
ರಾಮಾಯಣ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜಯಂತಿ ಅಂಗವಾಗಿ ಹನುಮಮಾಲೆಯನ್ನು ಧಾರಣೆ ಮಾಡಿರುವ ನೂರಾರು ಮಾಲಾಧಾರಿಗಳು ಆಗಮಿಸಿ ಮಾಲೆಯನ್ನು ವಿಸರ್ಜನೆ ಮಾಡಿದರು.
ಹನುಮ ಜಯಂತಿಯ ಅಂಗವಾಗಿ 11 ದಿನಗಳ ಮುಂಚಿತವಾಗಿಯೇ ಹನುಮಮಾಲೆ ಧಾರಣೆ ಮಾಡಿರುತ್ತಾರೆ. ಮಾಲಾಧಾರಿಗಳು ಕಠಿಣ ವ್ರತ ಕೈಗೊಂಡು ಹನುಮನ ಆರಾಧನೆ ಮಾಡುತ್ತಾರೆ. ಹನುಮ ಜಯಂತಿಯಂದು ಮಾಲಾಧಾರಿಗಳು ಇರುಮುಡಿಯೊಂದಿಗೆ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಾಲೆಯನ್ನು ವಿಸರ್ಜನೆ ಮಾಡಿದರು.
ಇನ್ನೂ ಹನುಮ ಜಯಂತಿ ಇರುವ ಕಾರಣಕ್ಕೆ ತಾಲೂಕು ಸೇರಿದಂತೆ ನಾನಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿ, ಹನುಮನ ದರ್ಶನ ಪಡೆದುಕೊಂಡರು.
ವಿಶೇಷ ಪೂಜೆ ಸಲ್ಲಿಕೆ
ಅಂಜನಾದ್ರಿ ಬೆಟ್ಟದಲ್ಲಿ ಹನುಮ ಜಯಂತಿ ಅಂಗವಾಗಿ ಆಂಜನೇಯಸ್ವಾಮಿ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗಿದೆ. ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ, ಹನುಮಾನ ಚಾಲಿಸ್ ಪಠಣ ಸೇರಿದಂತೆ ನಾನಾ ಧಾರ್ಮಿಕ ಪೂಜೆ ಮಾಡಲಾಗಿದೆ. ನಂತರ ಹನುಮ ಮಾಲಾಧಾರಿಗಳು ಮಾಲೆ ವಿಸರ್ಜನೆ ಅಂಗವಾಗಿ ಬೆಟ್ಟದ ಮೇಲ್ಭಾಗದಲ್ಲಿ ಲೋಕ ಕಲ್ಯಾಣಕ್ಕಾಗಿ ಹೋಮ, ಹವನ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮಾಲೆ ವಿಸರ್ಜನೆಗೆ ಬಂದಿರುವ ಮಾಲಾಧಾರಿಗಳು ಹನುಮನ ದರ್ಶನ ಪಡೆದುಕೊಂಡು ಮಾಲೆ ವಿಸರ್ಜಿಸಿದರು.