ಸುದ್ದಿ ಸಂಗ್ರಹ ಕಲಬುರಗಿ
ಈಗಾಗಲೆ ಬಿಸಿಲಿನ ತಾಪ ಹೆಚ್ಚಾಗಿದೆ, ಬೇಸಿಗೆ ದಿನಗಳಲ್ಲಿ ವಾತಾವರಣ ಸಾಕಷ್ಟು ಬದಲಾವಣೆಯಾಗಿ, ಉಷ್ಣಾಂಶದಲ್ಲಿ ಏರಿಕೆಯಾಗುವುದರಿಂದ ಮಾನವನ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಆರೋಗ್ಯದಲ್ಲಿ ಏರು-ಪೇರುಗಳಾಗುವದರಿಂದ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಿಕೊಂಡು, ದೇಹದ ರಕ್ಷಣೆ ಮಾಡಿಕೊಳ್ಳಬೇಕೆಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದರು.
ನಗರದ ಶೇಖರೋಜಾದ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಏರ್ಪಡಿಸಿದ್ದ ‘ಬೇಸಿಗೆ ಕಾಲದ ಆರೋಗ್ಯದ ಮುಂಜಾಗ್ರತೆ ಕಾರ್ಯಕ್ರಮ’ದಲ್ಲಿ ಮಾತನಾಡಿದ ಅವರು, ಬೇಸಿಗೆ ದಿನಗಳಲ್ಲಿ ಉಷ್ಣಾಂಶ ಹೆಚ್ಚಾಗಿರುವದರಿಂದ ಬೆವರಿನ ಉತ್ಪಾದನೆಯ ಪ್ರಮಾಣ ಜಾಸ್ತಿಯಾಗಿರುತ್ತದೆ. ಆಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ದೇಹ ಬಿಸಿಯಾಗುತ್ತದೆ. ಆದ್ದರಿಂದ ಆಗಾಗ್ಗೆ ಸ್ವಲ್ಪ-ಸ್ವಲ್ಪ ನೀರು ಕುಡಿಯುತ್ತಿರಬೇಕು. ಹೊರಗಡೆ ತಿರುಗಾಡುವ ಸಮಯದಲ್ಲಿ ತಲೆ, ಮೈ-ಕೈಯನ್ನು ಬಿಳಿ ವಸ್ತ್ರದಿಂದ ರಕ್ಷಿಸಬೇಕು. ಈ ದಿನಗಳಲ್ಲಿ ತಲೆನೋವು, ಆಮಶಂಕೆ, ಸುಸ್ತು, ಉಷ್ಣ ಗುಳ್ಳೆಯಂತಹ ಸಾಮಾನ್ಯ ಕಾಯಿಲೆಗಳು ಉಂಟಾಗುತ್ತವೆ. ಆದ್ದರಿಂದ ಶುದ್ಧ, ಸ್ವಚ್ಚವಾದ ನೀರು, ಆಹಾರ ಸೇವಿಸಬೇಕು. ನಿಯಮಿತವಾಗಿ ವಿಶ್ರಾಂತಿ ಪಡೆಯಬೇಕು. ತಂಪು ಪಾನೀಯಗಳ ಬದಲಾಗಿ ಎಳೆ ನೀರು, ನಿಂಬೆ ರಸ ಸೇರಿದಂತೆ ವಿವಿಧ ಹಣ್ಣಿನ ರಸ ಸ್ವೀಕರಿಸಬೇಕೆಂದು ಅನೇಕ ಸಲಹೆ- ಸೂಚನೆ ನೀಡಿದರು.
ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ವೈದ್ಯರು ಸೂಚಿಸಿದ ಸಲಹೆ-ಸೂಚನಗೆಳನ್ನು ಪಾಲಿಸಿ, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಗಂಗಾಜ್ಯೋತಿ ಗಂಜಿ, ಮಂಗಲಾ ಚಂದಾಪೂರೆ, ಜಗನ್ನಾಥ ಗುತ್ತೇದಾರ, ನಾಗೇಶ್ವರಿ ಮುಗಳಿವಾಡಿ, ಶ್ರೀದೇವಿ, ರೇಷ್ಮಾ ನಕ್ಕುಂದಿ, ಚಂದ್ರಕಲಾ ಮಠಪತಿ, ಸಂಗಮ್ಮ ಅತನೂರ, ಲಕ್ಷ್ಮಿ ಮೈಲಾರಿ, ಮರಲಿಂಗಮ್ಮ, ನಾಗಮ್ಮ ಚಿಂಚೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.