ಸುದ್ದಿ ಸಂಗ್ರಹ ಬೆಂಗಳೂರು
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ತಂದಿದೆ. ತೃತೀಯ ಭಾಷೆ ಗ್ರೇಡ್ಗೆ ಸೀಮಿತಗೊಳಿಸಿದ್ದು, ಈ ವರ್ಷದಿಂದಲೆ ಜಾರಿಯಾಗಲಿದೆ. ಈ ಮೂಲಕ ಒಟ್ಟು 625 ಅಂಕಗಳಿಗೆ ಬದಲಾಗಿ 525 ಅಂಕಕ್ಕೆ ಫಲಿತಾಂಶ ನೀಡಲಾಗುತ್ತದೆ.
ಈ ಬಗ್ಗೆ ಸ್ವತಃ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ಹಂಚಿಕೊಂಡರು. ಒಟ್ಟು ಅಂಕಗಳಲ್ಲಿ ಭಾರಿ ಕಡಿತವಾಗಲಿದ್ದು, ತೃತೀಯ ಭಾಷೆಯ ಅಂಕಗಳು ಫಲಿತಾಂಶಕ್ಕೆ ಪರಿಗಣಿಸದಿರಲು ತೀರ್ಮಾನಿಸಲಾಗಿದೆ. ಇದುವರೆಗೆ 625 ಅಂಕಗಳಿಗೆ ನಡೆಯುತ್ತಿದ್ದ ಪರೀಕ್ಷೆಯನ್ನು ಈಗ 525 ಅಂಕಗಳಿಗೆ ಸೀಮಿತಗೊಳಿಸಲಾಗಿದೆ.
ತೃತೀಯ ಭಾಷೆಗೆ A, B, C ಅಥವಾ D ಗ್ರೇಡ್
ತೃತೀಯ ಭಾಷೆಯಾದ ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ ಇತ್ಯಾದಿ ಅಂಕಗಳನ್ನು ಒಟ್ಟು ಫಲಿತಾಂಶಕ್ಕೆ ಪರಿಗಣಿಸಲಾಗುವುದಿಲ್ಲ. ಬದಲಾಗಿ, ತೃತೀಯ ಭಾಷೆಯಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳ ಆಧಾರದ ಮೇಲೆ A, B, C ಅಥವಾ D ಗ್ರೇಡ್ ನೀಡಲಾಗುತ್ತದೆ. ಆದರೆ ವಿದ್ಯಾರ್ಥಿಗಳು ಮಾರ್ಚ್ 31ರಂದು ನಡೆದ ಈ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿತ್ತು.
ರಾಜ್ಯದಲ್ಲಿ ಸದ್ಯಕ್ಕೆ ತ್ರಿಭಾಷಾ ನೀತಿಯೇ ಮುಂದುವರಿಯಲಿದೆ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ಶಿಕ್ಷಣ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಸದ್ಯಕ್ಕೆ ಈ ನಿಯಮ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸಲಿದ್ದು, ಉಳಿದ ತರಗತಿಗಳ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಹಿಂದಿ ಪರೀಕ್ಷೆ ದಿನಾಂಕ ಬದಲಾವಣೆ
ಮಹಾವೀರ ಜಯಂತಿ ರಜೆಯ ಬದಲಾವಣೆಯಿಂದಾಗಿ ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಮಾಚ್ 30ರಂದು ನಡೆಯಬೇಕಿದ್ದ ತೃತೀಯ ಭಾಷಾ ಪರೀಕ್ಷೆಯನ್ನು (ಹಿಂದಿ ಸೇರಿದಂತೆ) ಮಾರ್ಚ್ 31ಕ್ಕೆ ಮುಂದೂಡಲಾಗಿದೆ. ಸರ್ಕಾರವು ಮಾರ್ಚ್ 31ರಂದು ನೀಡಿದ್ದ ರಜೆಯನ್ನು ಮಾರ್ಚ್ 30ಕ್ಕೆ (ಮಹಾವೀರ ಜಯಂತಿ ಪ್ರಯುಕ್ತ) ಸ್ಥಳಾಂತರಿಸಿದೆ. ಪರೀಕ್ಷಾ ಕೇಂದ್ರಗಳು ಮತ್ತು ಪ್ರವೇಶ ಪತ್ರಗಳಲ್ಲಿ ಯಾವುದೆ ಬದಲಾವಣೆ ಇರುವುದಿಲ್ಲ. ಕೇವಲ ಪರೀಕ್ಷಾ ದಿನಾಂಕ ಮಾತ್ರ ಬದಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ.
ಶಾಲಾ ದಾಖಲಾತಿಗೂ 2 ತಿಂಗಳು ಸಡಿಲಿಕೆ
ಮಕ್ಕಳನ್ನು ಒಂದನೇ ತರಗತಿಗೆ ಸೇರಿಸುವ ವಯಸ್ಸಿನ ಮಿತಿಯ ಬಗ್ಗೆ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಒಂದನೇ ತರಗತಿ ಸೇರಲು ಮಗುವಿಗೆ 6 ವರ್ಷ ತುಂಬಿರಬೇಕು ನಿಯಮದ ಪ್ರಕಾರ 2 ತಿಂಗಳ ಸಡಿಲಿಕೆ ನೀಡಲು ಅವಕಾಶವಿದೆ. ಅಂದರೆ ಮಗುವಿಗೆ 5 ವರ್ಷ 10 ತಿಂಗಳು ತುಂಬಿದ್ದರೂ ಒಂದನೇ ತರಗತಿಗೆ ದಾಖಲಿಸಬಹುದು. ಇದೆ ವಯೋಮಿತಿಯ ರಿಯಾಯಿತಿ ಪೂರ್ವ ಪ್ರಾಥಮಿಕ ತರಗತಿಗಳ ದಾಖಲಾತಿಗೂ ಅನ್ವಯವಾಗಲಿದೆ.