ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಮಲ್ಲಿಕಾರ್ಜುನ ಮುತ್ಯಾಗೆ ಮತ್ತೆ ಸಂಕಷ್ಟ

ಜಿಲ್ಲೆ

ಸುದ್ದಿ ಸಂಗ್ರಹ ಯಾದಗಿರಿ
ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ದಾಖಲಾಗಿದ್ದ ಪೋಕ್ಸೋ ಪ್ರಕರಣದಲ್ಲಿ ಮಲ್ಲಿಕಾರ್ಜುನ ಮುತ್ಯಾಗೆ ಮತ್ತೆ ಸಂಕಷ್ಟ ಎದುರಾಗಿದೆ. ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ ವಜಾಗೊಳಿಸಿದೆ.

ಮಲ್ಲಿಕಾರ್ಜುನ ಮುತ್ಯಾ ನಿರೀಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಇಂದು ವಿಚಾರಣೆ ನಡೆಸಿದ ಯಾದಗಿರಿ ಜಿಲ್ಲಾ ಪ್ರಧಾನ ಸತ್ರ ನ್ಯಾಯಲಯ ಅರ್ಜಿ ವಜಾಗೊಳಿಸಿದೆ. ಅರ್ಜಿ ವಜಾ ಬೆನ್ನಲ್ಲೆ ಇದೀಗ ಮುತ್ಯಾ ಭಕ್ತರು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಜಾಮೀನು ಪಡೆಯಲು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ಬಾಲಕಿಯ ಜೊತೆ ಮಲ್ಲಿಕಾರ್ಜುನ ಮುತ್ಯಾ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೆ ಮುತ್ಯಾನ ವಿರುದ್ಧ ಕ್ರಮ ಜರುಗಿಸಲು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ದೂರು ದಾಖಲಿಸಿಕೊಂಡಿತ್ತು. ಯಾದಗಿರಿ ಎಸ್ಪಿ ಅವರಿಗೆ ಪತ್ರವನ್ನೂ ಬರೆದಿದ್ದರು. ಅದರಂತೆ ಗೋಗಿ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಈಗಾಗಲೆ ಪೊಲೀಸ್ ಠಾಣೆಗೆ ಹಾಜರಾಗಿ ಮಲ್ಲಿಕಾರ್ಜುನ ಮುತ್ಯಾ ತನಿಖೆಗೆ ಸಹಕರಿಸಿದ್ದಾರೆ.

Leave a Reply

Your email address will not be published. Required fields are marked *