ಕೆಪಿಎಸ್- ಮ್ಯಾಗ್ನೆಟ್ ಶಾಲೆಯ ಶಂಕುಸ್ಥಾಪನೆಗೆ ಎಐಡಿಎಸ್‍ಒ ಖಂಡನೆ

ನಗರದ

ಸುದ್ದಿ ಸಂಗ್ರಹ ಶಹಾಬಾದ
ಜಿಲ್ಲೆಯಾದ್ಯಂತ ಪೋಷಕರು ಮತ್ತು ವಿದ್ಯಾರ್ಥಿಗಳು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಜಿಲ್ಲೆಯ ಜನತೆಯ ಈ ತೀವ್ರ ಆಕ್ರೋಶದ ನಡುವೆಯೂ, ಮುಖ್ಯಮಂತ್ರಿಗಳು ನಾಳೆ ಕಲಬುರಗಿ ಜಿಲ್ಲೆಗೆ ಭೇಟಿ ನೀಡಿ ಕೆಪಿಎಸ್ ಶಾಲೆಗಳ ಉದ್ಘಾಟನೆ ಮಾಡುತ್ತಿರುವುದು ಅತ್ಯಂತ ಖೇದಕರ ಎಂದು ಎಐಡಿಎಸ್‍ಒ ರಾಜ್ಯ ಉಪಾಧ್ಯಕ್ಷ ಹಣಮಂತ ಎಸ್.ಹೆಚ್ ಖಂಡಿಸಿದರು.

ನಗರದ ರವಿವಾರ ಬಸವೇಶ್ವರ ವೃತ್ತದದಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) -ಮ್ಯಾಗ್ನೆಟ್ ಶಾಲೆಗಳ ಯೋಜನೆ ಎಂಬ ವಂಚನೆಯ ಮುಖವಾಡದ ಅಡಿಯಲ್ಲಿ, ಸರ್ಕಾರವು ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ವಿಲೀನಗೊಳಿಸುತ್ತಿದೆ. ಈ ಯೋಜನೆಯಿಂದಾಗಿ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಾವಿರಾರು ಸರ್ಕಾರಿ ಶಾಲೆಗಳು ಮುಚ್ಚಲಿವೆ. ಇದನ್ನು ಖಂಡಿಸಿ ಎಐಡಿಎಸ್‍ಒ ಸಂಘಟನೆಯ ನೇತೃತ್ವದಲ್ಲಿ ರಾಜ್ಯವ್ಯಾಪಿ ಹಾಗೂ ಕಲ್ಯಾಣ ಕರ್ನಾಟಕ ವಲಯದಲ್ಲಿ ಎರಡು ತಿಂಗಳಿನಿಂದ ಚಳುವಳಿ ನಡೆಯುತ್ತಿದೆ. ಈಗಾಗಲೇ ಹಲವಾರು ಪ್ರತಿಭಟನೆಗಳಲ್ಲಿ ಸಾವಿರಾರು ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಆದಾಗ್ಯೂ, ಜನ ಚಳುವಳಿಗೆ ಯಾವುದೆ ಮನ್ನಣೆ ನೀಡದೆ ಮುಖ್ಯಮಂತ್ರಿಗಳು, ಜೇವರ್ಗಿ ತಾಲೂಕಿನ ಯಡ್ರಾಮಿಯಲ್ಲಿ ಕೆ.ಪಿ.ಎಸ್. ಮ್ಯಾಗ್ನೆಟ್ ಶಾಲೆಯ ಶಂಕು ಸ್ಥಾಪನೆಗೆ ಆಗಮಿಸುತ್ತಿರುವುದು ಜನಸಾಮಾನ್ಯರಿಗೆ ಮಾಡುತ್ತಿರುವ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಐಡಿಎಸ್‍ಒ ಜಿಲ್ಲಾ ಕೌನ್ಸಿಲ್ ಜಂಟಿ ಕಾರ್ಯದರ್ಶಿ ದೇವರಾಜ್ ಹೊನಗುಂಟ ಮಾತನಾಡಿ, ಕಲಬುರಗಿ ಜಿಲ್ಲೆಯ ಹಿಂದುಳಿದ ಪ್ರದೇಶಗಳ ಮತ್ತು ತಾಂಡಾಗಳ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಅಭಿವೃದ್ಧಿಪಡಿಸುವುದನ್ನು ಬಿಟ್ಟು, ಶಾಲೆಗಳನ್ನೆ ಮುಚ್ಚುವುದು ಸರಿಯಲ್ಲ. ಶಾಲೆಗಳು ಮುಚ್ಚುವ ಯೋಜನೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮದ 300 ಕೋಟಿಯಷ್ಟು ನಿಧಿ ಬಳಕೆ ಮಾಡುತ್ತಿರುವುದು ಈ ಭಾಗದ ಜನರಿಗೆ ಮಾಡುತ್ತಿರುವ ದ್ರೋಹವಾಗಿದೆ.” ಎಂದು ಹೇಳಿದರು.

ಒಂದೇ ಒಂದು ಸರ್ಕಾರಿ ಶಾಲೆಯೂ ಮುಚ್ಚದಂತೆ ಸರ್ಕಾರ ಲಿಖಿತ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು……

ಪ್ರತಿಭಟನೆಯಲ್ಲಿ ಎಐಡಿಎಸ್‍ಒ ಜಿಲ್ಲಾ ಸದಸ್ಯರುಗಳಾದ ಅಜಯ್ ಗುರುಜಾಲಕರ್, ಬಾಬು ಪವಾರ್, ಹೋರಾಟಗಾರರಾದ ಜಗನ್ನಾಥ್ ಎಸ್.ಎಚ್, ರಮೇಶ್ ದೇವಕರ್, ನೀಲಕಂಠ ಹುಲಿ, ಶಹಾಬಾದ್ ಸುತ್ತಮುತ್ತಲಿನ ಹಳ್ಳಿಗಳ ಪೋಷಕರು, ಆಟೋಚಾಲಕರು, ವ್ಯಾಪಾರಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *