ನಾಡು-ನುಡಿಗೆ ಡಾ.ಕೆ.ಶಿವರಾಮ ಕಾರಂತರ ಕೊಡುಗೆ ಅಪಾರ

ನಗರದ

ಸುದ್ದಿ ಸಂಗ್ರಹ ಕಲಬುರಗಿ
ಕಾದಂಬರಿಕಾರ, ಪರಿಸರವಾದಿ, ಪ್ರಗತಿಶೀಲ ಚಿಂತಕ, ಯಕ್ಷಗಾನ ತಜ್ಞ, ಸ್ವಾತಂತ್ರ್ಯ ಹೋರಾಟಗಾರ, ಚಿತ್ರ ನಿರ್ದೇಶಕ ಹೀಗೆ ಹತ್ತು ಹಲವು ಕ್ಷೇತ್ರಗಳ ಮೂಲಕ ಜ್ಞಾನಪೀಠ ಪ್ರಶಸ್ತಿ ಪುರಷ್ಕೃತ ಮೇರು ಸಾಹಿತಿ ಡಾ.ಕೆ.ಶಿವರಾಮ ಕಾರಂತ ಅವರು ನಾಡಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ ಪಾಟೀಲ್ ಅಭಿಪ್ರಾಯಪಟ್ಟರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗುತ್ತಿರುವ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಸರಣಿ ಉಪನ್ಯಾಸ-9ರಲ್ಲಿ ‘ಕನ್ನಡ ನಾಡು-ನುಡಿಗೆ ಕಾರಂತರ ಕೊಡುಗೆ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಜಗತ್ತಿನ ಶ್ರೀಮಂತಿಕೆಯಲ್ಲಿ ಒಂದಾಗಲು ಶಿವರಾಮ ಕಾರಂತರ ಕೊಡುಗೆ ಅನನ್ಯವಾಗಿದೆ. ‘ಮೂಕಜ್ಜಿಯ ಕನಸುಗಳು’, ‘ಮರಳಿ ಮಣ್ಣಿಗೆ’ ಎಂಬ ಮೇರು ಕೃತಿಗಳು, 47 ಕಾದಂಬರಿಗಳು ಒಳಗೊಂಡಂತೆ ಒಟ್ಟು 417 ಗ್ರಂಥಗಳು ರಚಿಸಿದ್ದಾರೆ. ತಮ್ಮ ಕಾದಂಬರಿಯಲ್ಲಿ ಸಮಾಜದ ಬಗ್ಗೆ ಕಳಕಳಿಯನ್ನು ಎತ್ತಿ ತೋರಿಸಿದ್ದಾರೆ. ಎಲ್ಲಾ ಜನರು ಓದುವ, ತಿಳಿಯುವ ಹಾಗೆ ಸರಳವಾದ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದು ಅವರ ವೈಶಿಷ್ಟ್ಯತೆಯಾಗಿದೆ. ಪ್ರಸಿದ್ದ ಇತಿಹಾಸಕಾರರಾದ ರಾಮಚಂದ್ರ ಗುಹಾ ಅವರು ಹೇಳಿರುವಂತೆ, “ಸ್ವಾತಂತ್ರೋತ್ತರ ಭಾರತದ ರವೀಂದ್ರನಾಥ ಟ್ಯಾಗೋರ” ಎಂದು ಶಿವರಾಮ ಕಾರಂತರನ್ನು ವರ್ಣಿಸಿದ್ದು, ಕಾರಂತರ ಮೇರು ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದರು.

ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ ಮಾತನಾಡಿ, ಕಾರಂತರಿಗೆ ‘ಕಡಲ ತೀರದ ಭಾರ್ಗವ’ ಎಂಬ ಬಿರುದಾಂಕಿತವಿತ್ತು. ಬಾಲ್ಯದಿಂದಲೆ ದೇಶ ಸೇವೆ ಮಾಡಬೇಕು, ಸಮಾಜದ ಬಗ್ಗೆ ಸದಾ ಕಳಕಳಿ ತುಡಿಯುತ್ತಿತ್ತು. ಗಾಂಧಿಜೀಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ದೇಶ ಸೇವೆಯ ಜೊತೆಯಲ್ಲಿ ಸಮಾಜಕ್ಕೆ ಬಹು ಉಪಯುಕ್ತವಾದ ಮತ್ತು ಮೌಲಿಕವಾದ ಸಾಹಿತ್ಯ ಕೃಷಿ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಸ್ನೇಹಾ ಚವ್ಹಾಣ್ ಮತ್ತು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *