ಸುದ್ದಿ ಸಂಗ್ರಹ ಶಹಾಬಾದ
ಹೊಸ ತಾಲೂಕು ಯಡ್ರಾಮಿಯಲ್ಲಿ ಮುಖ್ಯಮಂತ್ರಿಗಳು ಪ್ರಜಾಸೌಧ ಉದ್ಘಾಟನೆ ಮಾಡುತ್ತಿರುವುದು ಸಂತೋಷದ ವಿಷಯ, ಅದೆ ರೀತಿ ಶಹಾಬಾದ ತಾಲೂಕಿನ ಪ್ರಜಾಸೌಧದ ಅಡಿಗಲ್ಲು ಶೀಘ್ರವಾಗಿ ಮಾಡುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡ ಕೃಷ್ಣಪ್ಪ ಕರಣಿಕ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರಾದಸಂಸ ವತಿಯಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ತಾಲೂಕ ಘೋಷಣೆ ಮಾಡಿ, ಕಲಬುರಗಿ ಜಿಲ್ಲೆಯ ಶಹಾಬಾದ, ಕಾಳಗಿ ಮತ್ತು ಚಿತ್ತಾಪುರ ಮೂರು ತಾಲೂಕು ಎಂದು ವಿಭಜಿಸಿ ಸುಮಾರು 5 ವರ್ಷಗಳು ಕಳೆದುಹೋಗಿವೆ, ಆದರೆ ಇಲ್ಲಿಯವರೆಗೂ ಶಹಾಬಾದ್ ತಾಲೂಕಿನಲ್ಲಿ 2-3 ತಾಲೂಕು ಕಚೇರಿಗಳು ಹೊರತುಪಡಿಸಿ ಉಳಿದ ಕಛೇರಿಗಳು ಪ್ರಾರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ಕಲಬುರಗಿ ಜಿಲ್ಲೆಯ ವಿಭಜಿತ ನೂತನ ತಾಲೂಕ ಕೇಂದ್ರಗಳಿಗೆ ಪ್ರಜಾಸೌಧ ನಿರ್ಮಿಸಲು ಜಿಲ್ಲಾಧಿಕಾರಿಗಳು ನೀಲಿ ನಕ್ಷೆ ಕೂಡ ನೀಡಿದ್ದಿರಿ, ಆದರೆ ಶಹಾಬಾದನಲ್ಲಿ ಪ್ರಜಾಸೌಧ ನೀರ್ಮಿಸಲು ಬೀರಪ್ಪನ ಬೆಟ್ಟದಲ್ಲಿ 27 ಎಕರೆ ಸರ್ಕಾರಿ ಜಮೀನಿನ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್.ಎಸ್ ಮರಗೋಳ ಕಾಲೇಜ್ ಪಕ್ಕದಲ್ಲಿ ಇರುವ ಸರಕಾರಿ ಜಮೀನನ್ನು ತಾಲೂಕ ಆಡಳಿತ ಗುರುತಿಸಿದ್ದು ಅದನ್ನು ಹೈ-ಕ ಸಂಸ್ಥೆಯ ಎಸ್.ಎಸ್ ಮರಗೋಳ ಕಾಲೇಜಿನವರು ತಮ್ಮ ಜಾಗವೆಂದು ತಿಳಿದು ಕೋರ್ಟನಲ್ಲಿ ತಕರಾರು ಅರ್ಜಿ ಸಲ್ಲಿಸಿರುತ್ತಾರೆ, ಆದರೆ ಸಂಪೂರ್ಣ ಜಾಗವು ಹೈ-ಕ ಸಂಸ್ಥೆಯ ಎಸ್.ಎಸ್ ಮರಗೋಳ ಕಾಲೇಜಿಗೆ ನೀಡಿರುವುದಿಲ್ಲ, ಸಂಸ್ಥೆಗೆ ಕೇವಲ 4 ಎಕರೆ ನೀಡಿದ್ದಾರೆ, ಇನ್ನೂ ನೀರು ಸರಬರಾಜಿಗಾಗಿ ಸರಕಾರದ ಭೂಮಿಯನ್ನೆ ನೀಡಿದ್ದಾರೆ, ಕಾರಣ ತಾಲೂಕಿನ ಆಡಳಿತದ ವತಿಯಿಂದ ಗುರುತಿಸಿದ್ದ ಪಕ್ಕದ ಜಾಗದಲ್ಲೆ ಪ್ರಜಾಸೌಧಕ್ಕೆ ಅಡಿಗಲ್ಲು ಹಾಕಿ, ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಹೈ-ಕ ಶಿಕ್ಷಣ ಸಂಸ್ಥೆಯವರು ಶಹಾಬಾದ ಜನತೆಗೆ ಅನ್ಯಾಯ ಮಾಡಬಾರದು, ಸಂಸ್ಥೆ ಹಾಕಿದ ತಕರಾರು ಅರ್ಜಿ ವಾಪಸ್ ಪಡಿಬೇಕು ಇಲ್ಲವಾದರೆ ಶಹಾಬಾದ ತಾಲೂಕಿನ ಸಾರ್ವಜನಿಕರ ಪರವಾಗಿ ಸಂಸ್ಥೆಯ ವಿರುದ್ದ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಜಿಲ್ಲೆಯ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಾಸಕ ಬಸವರಾಜ ಮತ್ತಿಮೂಡ ಮತ್ತು ಜಿಲ್ಲಾಧಿಕಾರಿಗಳು ಹೊಸ ತಾಲೂಕಿನಲ್ಲಿ ಎಲ್ಲಾ ಇಲಾಖೆಯ ಕಛೇರಿ ಪ್ರಾರಂಭಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಪದಾದಿಕಾರಿಗಳಾದ ತಿಪ್ಪಣ್ಣ ಧನೇಕರ, ಜೈಭೀಮ ರಸ್ತಾಪೂರ, ಪುನೀತ ಹಳ್ಳಿ, ಸುನೀಲ ಮೆಂಗನ, ರಾಣೋಜಿ ಹಾದಿಮನಿ, ಭೀಮಾಶಂಕರ ಕಾಂಬಳೆ ಮತ್ತು ರಾಕೇಶ ಜಾಯಿ ಉಪಸ್ಥಿರಿದರು.