ಸುದ್ದಿ ಸಂಗ್ರಹ ಕಲಬುರಗಿ
ಪಿಂಚಣಿ ನೌಕರನ ಹಕ್ಕಾಗಿದೆ, ನೌಕರರು ನಿವೃತ್ತಿಯಾದ ನಂತರ ಬದುಕು ಸಾಗಿಸಲು ಪಿಂಚಣಿ ನೀಡುವುದು ಅವಶ್ಯಕ ಎಂದು ನಿವೃತ್ತ ಕೃಷಿ ಅಧಿಕಾರಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ ಹೇಳಿದರು.
ನಗರದ ಗೋವಾ ಹೋಟೆಲ್ ಎದುರುಗಡೆಯ ಸಕ್ಸಸ್ ಕಂಪ್ಯೂಟರ್ ತರಬೇತಿ ಸಂಸ್ಥೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಜರುಗಿದ “ರಾಷ್ಟ್ರೀಯ ಪಿಂಚಣಿದಾರರ ದಿನಾಚರಣೆ” ಉದ್ಘಾಟಿಸಿ ಮಾತನಾಡಿದ ಅವರು, 2006ರ ಎ.1ರಿಂದ ನೇಮಕಗೊಂಡ ಸರ್ಕಾರಿ ನೌಕರರಿಗೂ ಕೂಡಾ ಹಳೆಯ ಮಾದರಿಯ ಪಿಂಚಣಿ ನೀಡಬೇಕು ಎಂದರು.
ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ನಮ್ಮ ದೇಶದಲ್ಲಿ ರಾಷ್ಟ್ರೀಯ ಪಿಂಚಣಿದಾರರ ದಿನವನ್ನು ಡಿಸೆಂಬರ್ -17 ರಂದು ಆಚರಿಸಲಾಗುತ್ತದೆ, ಇದು ನಿವೃತ್ತಿ ಹೊಂದಿದವರಿಗೆ ಘನತೆ ಮತ್ತು ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪನ್ನು ಸ್ಮರಿಸುತ್ತದೆ. ವಯಸ್ಸಾದವರ ಹಕ್ಕುಗಳು ಮತ್ತು ಕಲ್ಯಾಣದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಪಿಂಚಣಿದಾರರ ಹಕ್ಕುಗಳಿಗಾಗಿ ಹೋರಾಡಿದ ಡಿ.ಎಸ್. ನಕಾರ ಅವರ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.