ಸುದ್ದಿ ಸಂಗ್ರಹ ಕಲಬುರಗಿ
ಭ್ರಷ್ಟಾಚಾರ ಮುಕ್ತ ಭಾರತದ ನಿರ್ಮಾಣ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ ಪಾಟೀಲ್ ಮಾರ್ಮಿಕವಾಗಿ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿನ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಬೆಳಿಗ್ಗೆ ಏರ್ಪಡಿಸಿದ್ದ “ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾಚರಣೆ”ಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಪ್ರತಿಜ್ಞೆ ವಿಧಿ ಬೋಧಿಸಿ, ನಂತರ ಮಾತನಾಡಿದ ಅವರು, ನಮ್ಮ ದೇಶದ ಎಲ್ಲಾ ಕ್ಷೇತ್ರಗಳಿಗೆ ವ್ಯಾಪಿಸಿದ ಬೃಹತ್ ಪಿಡುಗಾದ ಭ್ರಷ್ಟಾಚಾರದ ಪರಿಣಾಮ ಭಾರತದ ನಿಜವಾದ ಆತ್ಮಕ್ಕೆ ಧಕ್ಕೆಯಾಗಿದೆ. ಜನರ ದಕ್ಷತೆ, ಪ್ರಾಮಾಣಿಕತೆ ಕುಸಿದಿದೆ. ಸಮಾಜ ಮತ್ತು ಸರ್ಕಾರದ ಮೇಲಿನ ನಂಬಿಕೆಯೇ ಇಲ್ಲವಾಗಿದೆ.ಇದು ದೇಶಕ್ಕೆ ಶಾಪವಾಗಿ ಪರಿಣಮಿಸಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ವಿವಿಧ ಕಾರಣಗಳಿಂದ ಭ್ರಷ್ಟಾಚಾರ ಹೆಚ್ಚಾಗಿದೆ. ಅದನ್ನು ಬೇರು ಸಹಿತ ಕಿತ್ತೊಗೆಯಲು ವಿದ್ಯಾರ್ಥಿ ದಿಸೆಯಿಂದಲೆ ಪ್ರತಿಜ್ಞೆ, ದೃಢ ಮನಸ್ಸು ಮಾಡಿ, ಮುಂದೆ ಅದರಂತೆ ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಸ್ನೇಹಾ ಚವ್ಹಾಣ, ರುಕ್ಸಾನಾ ಪಟೇಲ್ ಮತ್ತು ಕೌಲಗಾ ಪಿಡಿಓ ಶರಣಬಸಪ್ಪ ಕಡಗಂಚಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.