ಸುದ್ದಿ ಸಂಗ್ರಹ ಕಲಬುರಗಿ
ದೇಶದ ಎಲ್ಲಾ ಕ್ಷೇತ್ರಗಳಿಗೆ ವ್ಯಾಪಿಸಿದ ಬೃಹತ್ ಪಿಡುಗಾದ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಎಲ್ಲರು ಶ್ರಮಿಸಬೇಕು ಎಂದು ಉಪನ್ಯಾಸಕ ಮಲ್ಲಿಕಾರ್ಜುನ ದೊಡ್ಡಮನಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್’ಎಸ್’ಎಸ್ ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ “ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾಚರಣೆ”ಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ದಿನಾಚರಣೆ ಉದ್ಘಾಟಿಸಿ, ಮಾತನಾಡಿದರು.
ಪ್ರತಿಜ್ಞೆ ವಿಧಿ ಬೋಧಿಸಿ ಮಾತನಾಡಿದ ಎನ್’ಎಸ್’ಎಸ್ ಅಧಿಕಾರಿ ಎಚ್.ವಿಪಾಟೀಲ್, ಭ್ರಷ್ಟಾಚಾರದ ಪರಿಣಾಮ ಭಾರತದ ನಿಜವಾದ ಆತ್ಮಕ್ಕೆ ಧಕ್ಕೆಯಾಗಿದೆ. ಜನರ ದಕ್ಷತೆ, ಪ್ರಾಮಾಣಿಕತೆ ಕುಸಿದಿದೆ. ಸಮಾಜ ಮತ್ತು ಸರ್ಕಾರದ ಮೇಲಿನ ನಂಬಿಕೆಯೇ ಇಲ್ಲವಾಗಿದೆ.ಇದು ದೇಶಕ್ಕೆ ಶಾಪವಾಗಿ ಪರಿಣಮಿಸಿದ್ದು, ಭ್ರಷ್ಟಾಚಾರ ಮುಕ್ತ ಭಾರತದ ನಿರ್ಮಾಣ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದರು.
ವಿವಿಧ ಕಾರಣಗಳಿಂದ ಭ್ರಷ್ಟಾಚಾರ ಹೆಚ್ಚಾಗಿದೆ. ಅದನ್ನು ಬೇರು ಸಹಿತ ಕಿತ್ತೊಗೆಯಲು ವಿದ್ಯಾರ್ಥಿ ದಿಸೆಯಿಂದಲೇ ಪ್ರತಿಜ್ಞೆ, ದೃಢ ಮನಸ್ಸು ಮಾಡಿ, ಮುಂದೆ ಅದರಂತೆ ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸುವರ್ಣಲತಾ ಭಂಡಾರಿ, ನಯಿಮಾ ನಾಹಿದ್, ಲಿಂಗರಾಜ ಹಿರೇಗೌಡ, ವೀರೇಶ ಸಾಹು ಗೋಗಿ, ನಾರಾಯಣಸ್ವಾಮಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.