ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿ ಮರಳು ಲೂಟಿ: ಗಣಿ ಸಚಿವರ ತವರಿನಲ್ಲೆ ಅಕ್ರಮ ಮರಳು ಗಣಿಗಾರಿಕೆ

ಜಿಲ್ಲೆ

ದಾವಣಗೆರೆ: ಅಕ್ರಮ ಮರಳು ದಂಧೆಕೋರರು ಅನಧಿಕೃತವಾಗಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿ ಮರಳು ಲೂಟಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಗಣಿ ಸಚಿವರ ತವರಲ್ಲೆ ಈ ಕೃತ್ಯ ನಡೆಯುತ್ತಿದೆ. ಅನಧಿಕೃತವಾಗಿ ಬೃಹತ್ ಪೈಪ್‌ಗಳು, ಕಲ್ಲು ಬಂಡೆಗಳನ್ನು ಬಳಸಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲಾಗಿದೆ. ಮರಳು ತೆಗೆಯಲು ನದಿಯ ದಡದಲ್ಲಿರುವ ಹತ್ತಾರು ತೆಪ್ಪಗಳು, ನದಿಯ ತಟದಲ್ಲೆ ಇರುವ ಮರಳು ಫಿಲ್ಟರ್ ಹಾಗೂ ಜರಡಿ ಬಾವಿಯಲ್ಲಿ ಕಾಣಿಸಿಕೊಂಡಿವೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಗಡಿ ಮತ್ತು ಭದ್ರಾವತಿ ತಾಲೂಕಿನ ಗಡಿ ಭಾಗದಲ್ಲಿರುವ ತುಂಗಭದ್ರಾ ನದಿಯ ಒಡಲಿನಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ.

ಹೊನ್ನಾಳಿ, ನ್ಯಾಮತಿ ತಾಲೂಕಿನ ಗಡಿಗ್ರಾಮವಾದ ಹನಗವಾಡಿ, ಮಳಲಿ ಹಾಗೂ ನಿಂಬೆಗೊಂದಿ ಗ್ರಾಮದ ಪಕ್ಕದಲ್ಲಿ ಹಾದುಹೋಗಿರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಅನಧಿಕೃತ ಸೇತುವೆ ನಿರ್ಮಾಣ ಮಾಡಲಾಗಿದೆ. ಹೊನ್ನಾಳಿ ನ್ಯಾಮತಿ ತಾಲೂಕಿನ ಗಡಿ ಗ್ರಾಮದಲ್ಲಿರುವ ಮರಳನ್ನು ಭದ್ರಾವತಿ ತಾಲೂಕಿನ ಗಡಿ ಗ್ರಾಮಗಳ ತೋಟಗಳಲ್ಲಿ ಸ್ಟಾಕ್ ಮಾಡಿಕೊಂಡು ಅಲ್ಲಿಂದ ಲಾರಿಗಳ ಮೂಲಕ ಬೇರೆಡೆಗೆ ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿಕೊಂಡು, ತೆಪ್ಪಗಳ ಮೂಲಕ ಮರಳು ತೆಗೆಯುತ್ತಿದೆ. ಮರಳನ್ನು ಫಿಲ್ಟರ್ ಮಾಡಿ ಲಾರಿಗಳಲ್ಲಿ ಸಾಗಾಟ ಮಾಡುತ್ತಿದ್ದು, ಇದು ಅಧಿಕಾರಿಗಳಿಗೆ ಗೊತ್ತಿಲ್ವ ಅಂತ ಜನ ಪ್ರಶ್ನಿಸುತ್ತಿದ್ದಾರೆ. ಅದರಲ್ಲೂ ಗಣಿ ಭೂ ಮತ್ತು ವಿಜ್ಞಾನ ಸಚಿವರ ತವರಿನಲ್ಲೆ ಕೋಟ್ಯಂತರ ರೂ ಮರಳು ಲೂಟಿಯಾಗುತ್ತಿದೆ. ಸಚಿವರಿಗೆ ಈ ಬಗ್ಗೆ ಮಾಹಿತಿ ಇಲ್ಲವೆ ಎಂಬ ಪ್ರಶ್ನೆ ಕೇಳಿಬಂದಿದೆ.

Leave a Reply

Your email address will not be published. Required fields are marked *