112ಗೆ ಕರೆ ಮಾಡಿದ್ದ ಮಹಿಳೆಯನ್ನು ಬಲೆಗೆ ಬೀಳಿಸಿಕೊಂಡ ಪೊಲೀಸಪ್ಪನ ಪೋಲಿ ಆಟ

ರಾಜ್ಯ

ರಾಮನಗರ: ಪೊಲೀಸರೆಂದರೆ ಒಂದು ನಂಬಕೆ ಮತ್ತು ಧೈರ್ಯ. ಆದರೆ ಅಂತಹ ಹುದ್ದೆಗೆ ಅಪವಾದವೆಂಬಂತೆ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯ ಮೇಲೆ ಪೊಲೀಸ್ ಪೇದೆ ಆತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ.

ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಚನ್ನಪಟ್ಟಣ ತಾಲೂಕಿನ 112 ವಾಹನದ ಚಾಲಕನಾಗಿರುವ ಪುಟ್ಟಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂತ್ರಸ್ತೆ ಮಹಿಳೆ ದೂರು ದಾಖಲಿಸಿದ್ದಾಳೆ. ಇದರ ಬೆನ್ನಲ್ಲೇ ಪೇದೆ ಪುಟ್ಟಸ್ವಾಮಿಯನ್ನು ಅಮಾನತು ಮಾಡಲಾಗಿದೆ.

ಅದೊಂದು ದಿನ 112ಗೆ ಕರೆ ಬಂದಿತ್ತು. ನಮ್ಮೂರಲ್ಲಿ ಗಲಾಟೆಯಾಗುತ್ತಿದೆ ಬನ್ನಿ ಎಂದು ಎಂ.ಕೆ ದೊಡ್ಡಿ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬಳು ಕರೆ ಮಾಡಿದ್ದರು. ಆದರೆ ಆಕೆಯ ಫೋನ್ ನಂಬರ್ ಪಡೆದ ಪೇದೆ ಪುಟ್ಟಸ್ವಾಮಿ, ಆಕೆಯ ಜೊತೆ ಸಲುಗೆ ಬೆಳೆಸಿ ಆನಂತರ ಆಕೆಯ ಮನೆಯಲ್ಲಿ ನಾಲ್ಕು ಬಾರಿ ಆತ್ಯಾಚಾರ ಎಸಗಿದ್ದಾನೆ. ಕೇವಲ ಅದಷ್ಟೇ ಅಲ್ಲದೆ ಆಕೆಯಿಂದ ನಿರಂತರವಾಗಿ 12 ಲಕ್ಷ ರೂ. ಹಣ ಕೂಡ ಪೀಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಸಂತ್ರಸ್ತೆಯಿಂದ ಹಣಪೀಕಿದ ಪೇದೆ ಪುಟ್ಟಸ್ವಾಮಿ ಕಾಲಕ್ರಮೇಣ ಆಕೆಯನ್ನ ಕಡೆಗಣಿಸಲು ಪ್ರಾರಂಭಿಸಿದ್ದಾನೆ. ಬಂಗಾರವನ್ನ ಅಡವಿಟ್ಟು ಕೊಟ್ಟ ಹಣವನ್ನ ವಾಪಸ್ ಕೇಳಿದ್ರೆ ದರ್ಪ ಮೆರೆದಿದ್ದಾನೆ. ಇದರಿಂದಾಗಿ ಆಕೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೊನೆಗೆ ವಿಧಿ ಇಲ್ಲದೆ ಮಹಿಳೆ ಎಂ.ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಸಂತ್ರಸ್ತ ಮಹಿಳೆ ದೂರು ನೀಡುತ್ತಿದ್ದಂತೆ ಪೇದೆ ಪುಟ್ಟಸ್ವಾಮಿ ಮೊಬೈಲ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. ಈ ನಿಟ್ಟಿನಲ್ಲಿ ಎಸ್.ಪಿ ಶ್ರೀನಿವಾಸ್ ಗೌಡ ಅವರು ಪೇದೆ ಪುಟ್ಟಸ್ವಾಮಿಯನ್ನು ಅಮಾನತು ಮಾಡಿದ್ದಾರೆ.

ಇನ್ನು ಆತ್ಯಾಚಾರದ ಪ್ರಕರಣದ ತನಿಖೆಯನ್ನ ಡಿಸಿಆರ್ ಇ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಒಟ್ಟಾರೆ ಮಹಿಳೆಯೊಂದಿಗೆ ಮಾಡಿದೆಲ್ಲ ಮಾಡಿ ಪೊಲೀಸಪ್ಪ ತಲೆಮರೆಸಿಕೊಂಡಿದ್ದಾನೆ.

Leave a Reply

Your email address will not be published. Required fields are marked *